ಹೊಸದಿಗಂತ ವರದಿ, ಕಾರವಾರ:
ಉ.ಕ. ಜಿಲ್ಲೆಯಲ್ಲಿ ಮಂಗನ ಖಾಯಿಲೆ ಹರಡದಂತೆ ಈಗಿನಿಂದಲೇ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ , ಜಿಲ್ಲೆಯಲ್ಲಿ ಮಂಗನ ಖಾಯಿಲೆ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗನ ಖಾಯಲೆ ಕಾಣಿಸಿಕೊಳ್ಳಬಹುದಾದ ತಾಲೂಕು ಮತ್ತು ಗ್ರಾಮಗಳನ್ನು ಸಾಕಷ್ಟು ಮುಂಚಿತವಾಗಿ ಗುರುತಿಸಿ ಆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜಾಗೃತಿ ಕಾರ್ಯಕ್ರಮಗಳನ್ನು ಅಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದ ಅವರು, ಆ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗಳಿಗೆ ಡೆಪೋ ತೈಲವನ್ನು ವಿತರಿಸುವಂತೆ ಮತು ಅದನ್ನು ಬಳಸುವ ವಿಧಾನದ ಬಗ್ಗೆ ಅರಿವು ಮೂಡಿಸಬೇಕು ತಿಳಿಸಿದರು.
ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 1711 ಮಾನವ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಪಾಸಿಟಿವ್ ಬಂದಿದ್ದು ಪ್ರಸ್ತುತ ಅವರು ಕೂಡ ಗುಣಮುಖರಾಗಿದ್ದಾರೆ, ವಿವಿಧ ಕಾರಣಗಳಿಂದ 18 ಮಂಗಗಳು ಸಾವನ್ನಪ್ಪಿವೆ ಎಂದರು.