ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರ್ಬಳಕೆಯ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ತನಿಖೆಗೆ ಆದೇಶಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ.
ರನ್ಯಾ ರಾವ್ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ದುಬೈನಿಂದ ಬೆಂಗಳೂರಿಗೆ ಸಾಗಣೆಮಾಡುತ್ತಿದ್ದ ಸಮಯದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, ಪ್ರಕರಣದ ವಿಚಾರಣೆಯ ಸಮಯದಲ್ಲಿ ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು, ಈ ಅಕ್ರಮವನ್ನು ಮಾಡಿರುವ ಬಗ್ಗೆ ವರದಿಯಾಗಿದೆ .
ಉನ್ನತ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವ ಶಿಷ್ಟಾಚಾರಗಳನ್ನು ತಮ್ಮ ತಂದೆಯವರ ರಾಜ್ಯ ಐಪಿಎಸ್ ವೃಂದದ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ. ರಾಮಚಂದ್ರರಾವ್, ಐ.ಪಿ.ಎಸ್., ಇವರ ಹೆಸರನ್ನು ಬಳಕೆ ಮಾಡಿಕೊಂಡು ಮತ್ತು ಅವರಿಗೆ ನೀಡುವ ಶಿಷ್ಟಾಚಾರ ಸೇವೆಗಳನ್ನುದುರ್ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗಳನ್ನು ತಪ್ಪಿಸಿಕೊಂಡು ಅಕ್ರಮ ಕೃತ್ಯಗಳನ್ನು ನಡೆಸಿದ್ದಾರೆ.
ಆದ್ದರಿಂದ, ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಸಂಗತಿಗಳು ಹಾಗೂ ಸಂದರ್ಭ ಮತ್ತು ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸುತ್ತದೆ ಎಂದು ಆದೇಶ ಹೊರಡಿಸಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ತನಿಖೆಯನ್ನು ತಕ್ಷಣ ಪ್ರಾರಂಭಿಸಿ, ತನಿಖಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲು ಸೂಚಿಸಿದ್ದಾರೆ.