ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ರಾಜ್ಯಪಾಲ ಹರಿಬೌ ಕಿಸನ್ರಾವ್ ಬಾಗಡೆ ಮಹತ್ವದ ಹೇಳಿಕೆ ನೀಡಿದ್ದು, ಅತ್ಯಾಚಾರಿಗಳನ್ನು ನಾಯಿಗಳಂತೆ ಸಂತಾನಹರಣಗೊಳಿಸಬೇಕು ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಪಶುವೈದ್ಯಕೀಯ ಕಾಲೇಜಿನಲ್ಲಿ ಭಾರತ್ಪುರ ಬಾರ್ ಕೌನ್ಸಿಲ್‌ನ ಶಪಥ ಸಮಾರಂಭದಲ್ಲಿ ಮಾತನಾಡಿದ ಅವರು, ಅತ್ಯಾಚಾರ ವಿರುದ್ಧ ಹಲವಾರು ಕಾನೂನುಗಳು ಮತ್ತು ಶಿಕ್ಷೆಗಳಿವೆ. ಆದರೆ ಅಪರಾಧಿಗಳು ಇನ್ನೂ ಯಾವುದೇ ಭಯವನ್ನು ಹೊಂದಿಲ್ಲ. ಅತ್ಯಾಚಾರಿಗಳು ಸ್ಥಳದಲ್ಲೇ ಸಿಕ್ಕಿಕೊಂಡರೆ, ಜನರು ಸರಿಯಾಗಿ ಬಾರಿಸಬೇಕು. ಪುರಸಭೆಯು ನಾಯಿಗಳಿಗೆ ಸಂತಾನಹರಣ ಮಾಡುವಂತೆ ಅತ್ಯಾಚಾರಿಗಳಿಗೂ ಸಂತಾನಹರಣ ಮಾಡಬೇಕು ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಲಾಗುತ್ತಿದ್ದು, ಅತ್ಯಾಚಾರ ಎಸಗಲಾಗುತ್ತಿದೆ. ಆದರೆ ಜನರು ದುಷ್ಕರ್ಮಿಗಳನ್ನು ಎದುರಿಸಲು ಹೆದರುತ್ತಾರೆ. ಅವರು ವೀಡಿಯೊ ತುಣುಕುಗಳನ್ನು ಮಾಡಲು ಮುಂದಾಗುತ್ತಾರೆ. ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದ ಬೀವಾರ್ ಜಿಲ್ಲೆಯ ಬಿಜಯಾನಗರದಲ್ಲಿ ನಡೆದ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ.