ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆ ಏ.30 ರವರೆಗೆ ಜೋಗ ಜಲಪಾತಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕಿದ್ದು, ಕಾಮಗಾರಿ ಅನುಷ್ಟಾನದ ಸಮಯದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆoಬ ಹಿತದೃಷ್ಟಿಯಿಂದ ಜೋಗ ಜಲಪಾತದ ಪ್ರವೇಶ ದ್ವಾರವನ್ನು ಜ.1 ರಿಂದ ಮಾ.15 ರವರೆ ಮುಚ್ಚಲಾಗಿತ್ತು. ಇದೀಗ ಮಾ.15 ರ ವೇಳೆ ಜೋಗ ಜಲಪಾತದ ಮುಖ್ಯ ದ್ವಾರದ ಕಾಮಗಾರಿಯು ಪೂರ್ಣಗೊಳ್ಳದೇ ಇರುವುದರಿಂದ ಏ.30 ರವರೆಗೆ ಮುಚ್ಚಲಾಗಿದೆ.
ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಗುರುದತ್ತ ಹೆಗಡೆ ಮನವಿ ಮಾಡಿದ್ದಾರೆ.