ಪಾಕಿಸ್ತಾನದ 90 ಸೈನಿಕರ ಹತ್ಯೆ: ದಾಳಿಯ ಹೊಣೆ ಹೊತ್ತುಕೊಂಡ ಬಲೂಚ್ ಲಿಬರೇಶನ್ ಆರ್ಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೈನಿಕರಿದ್ದ ರೈಲಿನ ಮೇಲೆ ನಡೆದ ದಾಳಿ ಘಟನೆ ಮಾಸುವ ಮುನ್ನವೇ ಭಾನುವಾರ ಸೇನಾ ತುಕಡಿ ಮೇಲೆ ಮತ್ತೊಂದು ದಾಳಿ ನಡೆದಿದೆ.

ಪಾಕಿಸ್ತಾನದ 90 ಮಂದಿ ಸೈನಿಕರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದೆ.

ತನ್ನ ಮಜೀದ್ ಬ್ರಿಗೇಡ್ ಎಂಬ ಫಿದಾಯೀನ್‌ ಘಟಕವು ನೋಷ್ಕಿಯ ಆರ್‌ಸಿಡಿ ಹೆದ್ದಾರಿಯಲ್ಲಿರುವ ರಖ್ಶನ್ ಮಿಲ್ ಬಳಿ ಸೇನಾ ತುಕಡಿಯ ಮೇಲೆ ವಾಹನದಲ್ಲಿ ಜೋಡಿಸಲಾದ ಸುಧಾರಿತ ಸ್ಫೋಟಕ (ವಿಬಿಐಇಡಿ)ದ ಮೂಲಕ ದಾಳಿಯನ್ನು ನಡೆಸಿದೆ ಎಂದು ಬಲೂಚ್ ಲಿಬರೇಷನ್‌ ಆರ್ಮಿ ಹೇಳಿದೆ.

ತುಕಡಿಯು ಎಂಟು ಬಸ್‌ಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಸ್ಫೋಟದ ತೀವ್ರತೆಗೆ ಒಂದು ಬಸ್‌ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ ಎಂದು ಬಿಎಲ್‌ಎ ಹೇಳಿಕೆಯಲ್ಲಿ ತಿಳಿಸಿದೆ.
ಫತೇಹ್ ಸ್ಕ್ವಾಡ್ ಮತ್ತೊಂದು ಬಸ್ ಅನ್ನು ಸುತ್ತುವರೆದಿದ್ದು, ಬಸ್‌ನಲ್ಲಿದ್ದ ಎಲ್ಲಾ ಸೈನಿಕರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.

ಘಟನೆ ಸಂಬಂಧ ಪಾಕಿಸ್ತಾನದ ದೈನಿಕ ಡಾನ್‌ಗೆ ಪ್ರತಿಕ್ರಿಯೆ ನೀಡಿರುವ ನೋಷ್ಕಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಜಫರುಲ್ಲಾ ಸುಮಲಾನಿ ದಾಳಿಯನ್ನು ದೃಢಪಡಿಸಿದ್ದಾರೆ ಮತ್ತು ಪ್ರಾಥಮಿಕ ತನಿಖೆಗಳ ಪ್ರಕಾರ ಇದು ಆತ್ಮಾಹುತಿ ಬಾಂಬ್ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಗಾಯಾಳುಗಳಿಗೆ ನೋಷ್ಕಿ ಟೀಚಿಂಗ್‌ ಆಸ್ಪತ್ರೆ ಮತ್ತು ಎಫ್‌ಸಿ ಕ್ಯಾಂಪ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತುರ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!