ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಗಳ ಮೇಲೆ ಗುಟ್ಕಾ ಜಾಹೀರಾತುಗಳು ಕಾಣಿಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನಾರೋಗ್ಯಕರ ವಸ್ತುಗಳ ಪ್ರಚಾರ ತಕ್ಷಣ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಕೆಲವೆಡೆ ಹೋರಾಟಗಾರರು ಬಸ್ಗಳ ಮೇಲಿದ್ದ ಜಾಹೀರಾತು ಚಿತ್ರಗಳನ್ನು ಕಿತ್ತೆಸೆದು ಪ್ರತಿಭಟನೆ ನಡೆಸಿದ್ದಾರೆ.
ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಬಸ್ಗಳ ಹೊರಭಾಗದಲ್ಲಿ ಶೇಕಡಾ 40ರಷ್ಟು ಜಾಗಕ್ಕೆ ಮಾತ್ರ ಜಾಹೀರಾತು ಅನುಮತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವು ಬಸ್ಗಳಲ್ಲಿ ಈ ಮಿತಿ ಮೀರಿರುವುದು ನಿಯಮ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಎರಡು ತಿಂಗಳ ಹಿಂದೆಯೇ ಈ ಕುರಿತು ಸೂಚನೆ ನೀಡಲಾಗಿದ್ದು, ಹೆಚ್ಚಿನ ಜಾಗ ಬಳಸಲು ಪೂರ್ವಾನುಮತಿ ಅಗತ್ಯವಿದೆ ಎಂದರು. ಜಾಹೀರಾತುಗಳಿಂದ ಬಿಎಂಟಿಸಿಗೆ ವರ್ಷಕ್ಕೆ ಸುಮಾರು 60 ಕೋಟಿ ರೂಪಾಯಿ ಆದಾಯ ಬರುತ್ತಿದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ.



