ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್‌ ಓಪನ್?: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್;

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪಬ್‌ಗಳಿಗೆ ಅನುಮತಿ ‌ಕೊಡೋ ಕುರಿತು ಆದಷ್ಟು ಬೇಗ ನಿರ್ಧಾರ ಮಾಡೋದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಗೋಪಿನಾಥ್ , ಬೆಂಗಳೂರಿನಲ್ಲಿ ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುವ ನಿಯಮ ಇದೆ. ಆದ್ರೆ ಮಧ್ಯರಾತ್ರಿವರೆಗೂ ಪಬ್ ಗಳು ನಡೆಯುತ್ತಿವೆ. ಇಂದಿರಾ‌ನಗರ ಸೇರಿ ಅನೇಕ ಕಡೆ ನಿಯಮ ಮೀರಿ ಪಬ್ ನಡೆಯುತ್ತಿವೆ. ಇದನ್ನೇ ನೆಪ ಇಟ್ಟುಕೊಂಡು ಪೊಲೀಸರು ಪಬ್ ಅವರಿಗೆ ಕಿರುಕುಳಕೊಡುವ ಕೆಲಸ ಮಾಡ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ರಾತ್ರಿ 1 ಗಂಟೆವರೆಗೂ ಸರ್ಕಾರ ಅವಕಾಶ ಕೊಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಪಬ್ ಗಳಿಗೂ ರಾತ್ರಿ 1 ಗಂಟೆವರೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.‌

ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, ಅಬಕಾರಿ ಇಲಾಖೆಯಲ್ಲಿ ಎರಡು ರೀತಿ ಪಬ್ ಗಳಿಗೆ ನಾವು ಅನುಮತಿ ಕೊಡ್ತೀವಿ. ಸ್ವತಂತ್ರ ಪಬ್ ಗಳಿಗೆ ರಾತ್ರಿ 11.30ವರೆಗೆ ಅವಕಾಶ ಇದೆ‌. CL9 ಜೊತೆ ಹೊಂದುಕೊಂಡಿರೋ ಪಬ್ ಗಳಿಗೆ ಮಧ್ಯರಾತ್ರಿ 1 ಗಂಟೆ ಒಳಗೆ ಅವಕಾಶ ಕೊಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಬ್ ನಡೆಸುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು‌.

ಈ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ,ಅಬಕಾರಿ ಸಚಿವರು ಅಬಕಾರಿ ನಿಯಮದ ಆದೇಶದ ಬಗ್ಗೆ ಮಾತಾಡ್ತಿದ್ದಾರೆ. ಸಚಿವರು ಹೇಳಿದಂತೆ ಈಗ ಯಾರು ರಾತ್ರಿ 11.30ಕ್ಕೆ ಪಬ್ ಕ್ಲೋಸ್ ಮಾಡೊಲ್ಲ. ಇದನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಕಿರುಕುಳ ‌ಕೊಡ್ತಿದ್ದಾರೆ‌. ಬೆಂಗಳೂರು ಇಂಟರ್ ನ್ಯಾಷನಲ್ ಸಿಟಿ. ಬೆಂಗಳೂರನ್ನ ಲೈವ್ ಆಗಿ ಇಡಬೇಕು. ನನಗೂ ಕೂಡ ಪಬ್ ಅವಧಿ ವಿಸ್ತರಣೆ ಮಾಡೊ ಬಗ್ಗೆ ಡಿಮ್ಯಾಂಡ್ ಬಂದಿವೆ. ರಾತ್ರಿ ಒಂದು ಗಂಟೆವರೆಗೂ ಪಬ್‌ಗಳಿಗೆ ಅವಕಾಶ ಕೊಡುವ ಗೋಪಿನಾಥ್ ಸಲಹೆ ಕರೆಕ್ಟ್ ಇದೆ. ನಾನು ಅದನ್ನ ಒಪ್ಪುತ್ತೇನೆ. ನಾನು, ಗೃಹ ಸಚಿವರು ಅಬಕಾರಿ ಸಚಿವರು ಸಭೆ ಮಾಡಿ ಇದಕ್ಕೆ ಒಂದು ಪರಿಹಾರ ಮಾಡ್ತೀವಿ ಅನ್ನೋ ಮೂಲಕ ಪಬ್ ಗಳ ಅವಧಿ ವಿಸ್ತರಣೆ ಮಾಡೋ ಬಗ್ಗೆ ಪರೋಕ್ಷ ಸುಳಿವು ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!