ಹೊಸದಿಗಂತ ಡಿಜಿಟಲ್ ಡೆಸ್ಕ್;
ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ದೈತ್ಯ ‘X’ (ಈ ಹಿಂದೆ ಟ್ವಿಟರ್) ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.
ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಕಾನೂನುಬಾಹಿರ ವಿಷಯ ನಿಯಂತ್ರಣ ಮತ್ತು ಅನಿಯಂತ್ರಿತ ಸೆನ್ಸಾರ್‌ಶಿಪ್ ಅಂಶಗಳನ್ನು ಕೋರ್ಟ್ ನಲ್ಲಿ ಎಕ್ಸ್ ಸಂಸ್ಥೆ ಪ್ರಶ್ನಿಸಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಕೇಂದ್ರದ ವ್ಯಾಖ್ಯಾನದ ಬಗ್ಗೆ, ವಿಶೇಷವಾಗಿ ಸೆಕ್ಷನ್ 79(3)(b) ಬಳಕೆಯ ಬಗ್ಗೆ ತನ್ನ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಇದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಮುಕ್ತ ಅಭಿವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ‘X’ ವಾದಿಸಿದೆ.
ಸರಿಯಾದ ಕಾನೂನು ಪರಾಮರ್ಶೆ ಇಲ್ಲದೇ ಕಂಟೆಂಟ್ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಎಕ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
ಸರ್ಕಾರವು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು, ಅದರಲ್ಲೂ ಹೆಚ್ಚಾಗಿ ಸೆಕ್ಷನ್ 79(3)(ಬಿ) ಅನ್ನು ತಪ್ಪಾಗಿ ಅರ್ಥೈಸುತ್ತಿದೆ ಎಂಬುದು ಎಕ್ಸ್ನ ಪ್ರಮುಖ ಆರೋಪ. ತನ್ನ ಮೊಕದ್ದಮೆಗೆ ಪೂರಕವಾಗಿ ಅದು ಹಿಂದಿನ ಕೆಲ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎನಲ್ಲಿ ಕಂಟೆಂಟ್ ಬ್ಲಾಕ್ ಮಾಡಲು ಕಾನೂನು ಪ್ರಕ್ರಿಯೆ ನಿರ್ದಿಷ್ಟಪಡಿಸಲಾಗಿದೆ. ಆದರೆ, ಸರ್ಕಾರವು 79(3)(ಬಿ) ಅನ್ನು ಬಳಸಿ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಕಂಟೆಂಟ್ ಅಥವಾ ಪೋಸ್ಟ್ಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತಿದೆ ಎಂದು ಎಕ್ಸ್ ದೂರಿದೆ.
2015ರಲ್ಲಿ ಶ್ರೇಯಾ ಸಿಂಘಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಎಕ್ಸ್ ಉಲ್ಲೇಖಿಸಿ, ಸೆಕ್ಷನ್ 69ಎ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಕಾನೂನು ಮಾರ್ಗಗಳ ಮೂಲಕ ಕಂಟೆಂಟ್ ಅನ್ನು ನಿರ್ಬಂಧಿಸಬಹುದು ಎಂದು ಸುಪ್ರೀಂಕೋರ್ಟ್ ಆ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ತಿಳಿಸಿತ್ತು. ಆದರೆ, ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79 (3ಬಿ) ಪ್ರಕಾರ, ಆನ್ಲೈನ್ ಪ್ಲಾಟ್ಫಾರ್ಮ್ಗಳು ಕೋರ್ಟ್ ಅಥವಾ ಸರ್ಕಾರದಿಂದ ಆದೇಶ ಬಂದರೆ ಅಕ್ರಮ ಕಂಟೆಂಟ್ ಅನ್ನು ತೆಗೆದುಹಾಕುವುದು ಕಡ್ಡಾಯವಾಗುತ್ತದೆ. ಈ ಆದೇಶವನ್ನು 36 ಗಂಟೆಯೊಳಗೆ ಪಾಲಿಸದೇ ಹೋದರೆ ಸೆಕ್ಷನ್ 79(1)ರ ರಕ್ಷಣೆ ಸಿಗುವುದಿಲ್ಲ. ನಂತರ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸಬೇಕಾಗಬಹುದು. ಸೆಕ್ಷನ್ 79(1) ಪ್ರಕಾರ, ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರಕಟವಾಗುವ ಥರ್ಡ್ ಪಾರ್ಟಿ ಕಂಟೆಂಟ್ಗಳಿಂದ ಏನಾದರೂ ಸಮಸ್ಯೆ ಆದಲ್ಲಿ ಆ ಆನ್ಲೈನ್ ಪ್ಲಾಟ್ಫಾರ್ಮ್ಗೆ ಬಾಧ್ಯತೆ ಇರುವುದಿಲ್ಲ. ಆ ಮಟ್ಟಿಗೆ ಕಾನೂನಿನ ಸುರಕ್ಷತೆ ಇರುತ್ತದೆ. ಅದಿಲ್ಲದೇ ಹೋಗಿದ್ದರೆ ಎಕ್ಸ್, ಫೇಸ್ಬುಕ್ ಇತ್ಯಾದಿಯಲ್ಲಿ ಪ್ರಕಟವಾಗುವ ಹೇರಳ ವಿವಾದಾತ್ಮಕ ಪೋಸ್ಟ್ಗಳಿಗೆಲ್ಲಾ ಆ ಪ್ಲಾಟ್ಫಾರ್ಮ್ಗಳು ಹೊಣೆಯಾಗಬೇಕಾಗುತ್ತಿತ್ತು.
ಈ ಕಾನೂನನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕಾನೂನು ಸರ್ಕಾರಕ್ಕೆ ಕಂಟೆಂಟ್ ನಿರ್ಬಂಧಿಸಲು ಸ್ವತಂತ್ರ ಅಧಿಕಾರ ನೀಡುವುದಿಲ್ಲ. ಒಂದು ಕಂಟೆಂಟ್ ನಿರ್ಬಂಧಿಸಲು ಅಥವಾ ಬ್ಲಾಕ್ ಮಾಡಲು ಸರಿಯಾದ ಸಾಕ್ಷ್ಯಾಧಾರ ಒದಗಿಸುವುದು ಇತ್ಯಾದಿ ಕಾನೂನು ಮಾರ್ಗಗಳನ್ನು ಸರ್ಕಾರ ಅನುಸರಿಸಬೇಕು. ಅದು ಬಿಟ್ಟು ಏಕಪಕ್ಷೀಯವಾಗಿ ಕಂಟೆಂಟ್ ತೆಗೆಯಲು ಮುಂದಾಗುವುದು ತಪ್ಪು. ಇದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆ ಆಗುತ್ತದೆ ಎಂದು ಎಕ್ಸ್ ವಾದಿಸಿದೆ.