ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿ ಜೋಡಿನೇ ಆಗಿರಲಿ ಜನ ಸಾಮಾನ್ಯರೇ ಆಗಿರಲಿ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆ ಮುಖ್ಯವಾಗಿ ಚರ್ಚೆಗೆ ಬರೋದು ಜೀವನಾಂಶ.ಈ ಜೀವನಾಂಶವನ್ನು ಕೋರ್ಟ್ ಹೇಗೆ ನಿರ್ಧಾರ ಮಾಡುತ್ತೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಇದ್ದರೆ ಇಲ್ಲಿದೆ ಉತ್ತರ.
ಭಾರತೀಯ ಕಾನೂನಿನಲ್ಲಿ ವಿಚ್ಛೇದನದ ಸಂದರ್ಭದಲ್ಲಿ ಜೀವನಾಂಶ ಪಾವತಿಸಲು ಯಾವುದೇ ಸ್ಥಿರ ಸೂತ್ರವಿಲ್ಲ. ಜೀವನಾಂಶವನ್ನು ನಿರ್ಧರಿಸುವಾಗ ಅನೇಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರ ಆಧಾರದ ಮೇಲೆ ನ್ಯಾಯಾಲಯವು ಮೊತ್ತವನ್ನು ನಿರ್ಧರಿಸುತ್ತದೆ.
ಜೀವನಾಂಶವನ್ನು ನಿರ್ಧರಿಸುವಾಗ, ಪತಿ ಮತ್ತು ಪತ್ನಿಯ ಆರ್ಥಿಕ ಸ್ಥಿತಿ, ಅವರ ಗಳಿಕೆಯ ಸಾಮರ್ಥ್ಯ ಮುಂತಾದ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಬ್ಬ ಮಹಿಳೆ 15 ವರ್ಷದಿಂದ ಗೃಹಿಣಿಯಾಗಿದ್ದು, ಆಕೆ ಯಾವುದೇ ಉದ್ಯೋಗ ಮಾಡ್ತಿಲ್ಲ, ತನ್ನ ಮಕ್ಕಳಿಗಾಗಿ ವೃತ್ತಿ ಜೀವನದಿಂದ ದೂರವಿದ್ದಾಳೆ. ಆಕೆ ಪತಿ ಬ್ಯುಸಿನೆಸ್ ಮಾಡ್ತಿದ್ದಾನೆ ಎಂದಾಗ, ಪತಿಯ ಆದಾಯ ಹಾಗೂ ಪತ್ನಿಗೆ ಜೀವನ ನಡೆಸಲು ಎಷ್ಟು ಹಣದ ಅಗತ್ಯವಿದೆ ಎಂಬುದನ್ನು ಲೆಕ್ಕ ಹಾಕಿ ಜೀವನಾಂಶದ ಮೊತ್ತ ಘೋಷಿಸುತ್ತದೆ.
ಹೆಚ್ಚಿನ ವಿಚ್ಛೇದನ ಪ್ರಕರಣಗಳಲ್ಲಿ, ಹೆಂಡತಿಯರು ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಆದರೆ ಭಾರತೀಯ ಕಾನೂನು ಪುರುಷರಿಗೂ ಜೀವನಾಂಶವನ್ನು ಪಡೆಯುವ ಹಕ್ಕನ್ನು ನೀಡಿದೆ. 1955 ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ಮತ್ತು 25 ರ ಅಡಿಯಲ್ಲಿ, ಪತಿ ಜೀವನಾಂಶವನ್ನು ಕೇಳಬಹುದು.