ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿಕಾರಿಗಳ ಮನೆ ಮೇಲೆ ಆದಾಯ ತೆರಿಗೆ (IT) ಇಲಾಖೆ ದಾಳಿ ಮಾಡಿ ಕೋಟ್ಯಂತರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಗಳು ದಿನಾ ಬರ್ತಿದೆ. ಇಂತಹ ಟೈಮ್ ನಲ್ಲಿ ಮನೆಯಲ್ಲಿ ಎಷ್ಟು ನಗದು ಇಟ್ಟುಕೊಂಡ್ರೆ ನಾವು ಸೇಫ್ ಎನ್ನುವ ಪ್ರಶ್ನೆಯೊಂದು ಜನಸಾಮಾನ್ಯರನ್ನು ಕಾಡುತ್ತದೆ. ಹೀಗಾಗಿ ಇವತ್ತು ಈ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಭಾರತದಲ್ಲಿ ಮನೆಯಲ್ಲಿ ನಗದು ಇಡುವುದಕ್ಕೆ ಯಾವುದೇ ನಿಗದಿತ ಮಿತಿ ಇಲ್ಲ. ಆದಾಯ ತೆರಿಗೆ ಕಾಯ್ದೆ ಪ್ರಕಾರ, ನೀವು ಕಾನೂನುಬದ್ಧವಾಗಿ ಗಳಿಸಿದ ಹಣವನ್ನು ಸರಿಯಾದ ದಾಖಲೆಗಳೊಂದಿಗೆ ಇಟ್ಟುಕೊಳ್ಳಬಹುದು.
ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದರೆ, ನಿಮ್ಮ ಹಣದ ಮೂಲವನ್ನು ಸಾಬೀತುಪಡಿಸಬೇಕಾಗುತ್ತದೆ. ಇಲ್ಲವಾದರೆ, ಅದನ್ನು ಅಘೋಷಿತ ಆದಾಯವೆಂದು ಪರಿಗಣಿಸಿ ದಂಡ ವಿಧಿಸಬಹುದು.
ಹೆಚ್ಚಿನ ಪ್ರಮಾಣದ ನಗದು ಸಾಗಿಸುವಾಗಲೂ ವಿಚಾರಣೆಗೆ ಒಳಗಾಗಬಹುದು. ಆರ್‌ಬಿಐ (RBI) ಮನೆಯಲ್ಲಿ ನಗದು ಇಡುವ ಬಗ್ಗೆ ನಿರ್ದಿಷ್ಟ ಮಿತಿಯನ್ನು ನಿಗದಿಪಡಿಸಿಲ್ಲ, ಆದರೆ ದಾಖಲೆಗಳು ಅವಶ್ಯಕ.
ವಹಿವಾಟು ಮತ್ತು ಉಡುಗೊರೆ ಸಂಬಂಧಿತ ನಿಯಮಗಳ ಪ್ರಕಾರ, ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ವಹಿವಾಟು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದರೆ ಲೆಕ್ಕ ನೀಡಬೇಕು. ಯಾವುದೇ ವ್ಯಕ್ತಿಯಿಂದ ಒಂದು ದಿನದಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ನಗದು ಉಡುಗೊರೆಯನ್ನು ಸ್ವೀಕರಿಸಿದರೆ, ಅದಕ್ಕೂ ನೀವು ಲೆಕ್ಕ ನೀಡಬೇಕು.
ಹೀಗಾಗಿ, ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು, ನಿಮ್ಮ ನಗದಿನ ಪ್ರಮಾಣಕ್ಕೆ ಸರಿಯಾದ ದಾಖಲೆಗಳನ್ನು ಹೊಂದಿರುವುದು ಅತ್ಯಗತ್ಯ.