ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿ ಟೆಕ್ನಾಲಾಜಿಕಲ್ ವಿಶ್ವ ವಿದ್ಯಾನಿಲಯದ ಎಂಜಿಫೆಸ್ಟ್ 2025ರಲ್ಲಿ ಗಾಯಕ ಸೋನು ನಿಗಂ ಹಾಡುತ್ತಿದ್ದ ವೇಳೆ ಉದ್ರಿಕ್ತ ಗುಂಪು ವೇದಿಕೆಯತ್ತ ಕಲ್ಲು, ಬಾಟಲ್ ತೂರಿದ ಘಟನೆ ನಡೆದಿದೆ.
ಈ ವೇಳೆ ಅವರು ಕಾರ್ಯಕ್ರಮ ನಿಲ್ಲಿಸಿದರು.ಅದಾಗ್ಯೂ ಕೋಪಗೊಳ್ಳದೆ ಶಾಂತ ರೀತಿಯಿಂದ ವರ್ತಿಸಿ ಅವರು ಪರಿಸ್ಥಿತಿಯನ್ನು ಹತೋಟಿಗೆ ತರಲು ನೆರವಾದರು. ಬಳಿಕ ಈ ರೀತಿ ವರ್ತಿಸದಂತೆ ಮನವಿ ಮಾಡಿ ಪರಿಸ್ಥಿತಿ ತಿಳಿಯಾದ ಬಳಿಕ ತಮ್ಮ ಕಾನ್ಸರ್ಟ್ ಮುಂದುವರಿಸಿದರು. ಸದ್ಯ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼನಾನು ನಿಮಗಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಖುಷಿಯಿಂದ ಇರೋಣ. ಕಾರ್ಯಕ್ರಮ ಇಷ್ಟವಾಗದಿದ್ದರೆ ದಯವಿಟ್ಟು ಈ ರೀತಿಯ ವರ್ತನೆ ತೋರಬೇಡಿ. ಬೇಕಾದರೆ ಎದ್ದು ಹೋಗಬಹುದು’ʼ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಬಳಿಕ ಸೋನು ನಿಗಂ ಅನೇಕ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆದರೆ ಘಟನೆಯನ್ನೂ ಎಲ್ಲೂ ಉಲ್ಲೇಖಿಸಿಲ್ಲ. ಯಾಕಾಗಿ ವಿದ್ಯಾರ್ಥಿಗಳು ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.
ಇತ್ತ ಮಾಧ್ಯಮದ ಜತೆ ಮಾತನಾಡಿದ ಕೆಲವು ವಿದ್ಯಾರ್ಥಿಗಳು ವೇದಿಕೆಯತ್ತ ಕಲ್ಲು ತೂರಾಟ ನಡೆಸಿದ ಘಟನೆಯನ್ನು ದುರದೃಷ್ಟಕರ, ನಾಚಿಕೆಗೇಡು ಎಂದು ಕರೆದಿದ್ದಾರೆ. ʼಕೆಲವು ಪ್ರೇಕ್ಷಕರ ಕೃತ್ಯದಿಂದ ನಾವು ತಲೆ ತಗ್ಗಿಸಬೇಕಾಯ್ತು. ಕಾರ್ಯಕ್ರಮವನ್ನು ಅರ್ಧದಲ್ಲಿ ನಿಲ್ಲಿಸಿದ ಸೋನು ನಿಗಂ ಅಸಮಾಧಾನಗೊಳ್ಳದೆ, ಶಾಂತವಾಗಿ ವರ್ತಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರುʼ ಎಂದು ಹೇಳಿದ್ದಾರೆ.
ಸದ್ಯ ಸೋನು ನಿಗಂ ಅವರ ಈ ಕಾರ್ಯಕ್ರಮದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರು ಅಶಿಸ್ತು ತೋರಿದ ಪ್ರೇಕ್ಷಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.