ಬೆಳಗ್ಗೆ ಎದ್ದಾಗ ಒಂದು ಲೋಟ ಕಾಫಿ, ತಿಂಡಿ ಆದ್ಮೇಲೆ ಒಂದು ಲೋಟ ಟೀ ಮಧ್ಯಾಹ್ನ ನಿದ್ದೆ ಬಂತು ಅಂತ ಕಾಫಿ, ಇನ್ನು ಸಂಜೆ ಬೇಕೇ ಬೇಕಲ್ವಾ? ಈ ರೀತಿ ಸಕ್ಕರೆ ಹಾಕಿರೋ ಕಾಫಿ ಟೀ ದಿನವೂ ಕುಡಿಯುತ್ತಿದ್ದರೆ ಬೇಗನೇ ಮಧುಮೇಹಿಗಳಾಗ್ತೀರಿ ಜಾಗ್ರತೆ.
ಸಕ್ಕರೆ ಚಹಾ, ಕಾಫಿ ಮತ್ತು ತಂಪು ಪಾನೀಯಗಳ ಅತಿಯಾದ ಸೇವನೆಯು ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೈದರಾಬಾದ್ನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಸಂಶೋಧಕರು ಬಹಿರಂಗಪಡಿಸಿದ್ದಾರೆ.
ದಿನಕ್ಕೆ ಎರಡು ಬಾರಿ ಸಕ್ಕರೆ ಸಹಿತ ಚಹಾ ಅಥವಾ ಕಾಫಿ ಕುಡಿಯುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಆದರೆ, ತಂಪು ಪಾನೀಯಗಳನ್ನು ಆಗಾಗ್ಗೆ ಸೇವಿಸುವುದರಿಂದ ಟೈಪ್- 2 ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ ಎಂದು ರಿಸರ್ಚರ್ಸ್ ತಿಳಿಸಿದ್ದಾರೆ.
ಸಕ್ಕರೆ ಸಹಿತ ಚಹಾ, ಕಾಫಿ ಮತ್ತು ತಂಪು ಪಾನೀಯಗಳಲ್ಲಿ ಇರುವ ಸುಕ್ರೋಸ್ ಯಕೃತ್ತು, ಸ್ನಾಯುಗಳು ಮತ್ತು ಸಣ್ಣ ಕರುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಈ ಹಾನಿಕಾರಕ ಪರಿಣಾಮಗಳನ್ನು ಪರಿಗಣಿಸಿ, ಸಕ್ಕರೆ ಇಲ್ಲದೇ ಚಹಾ ಮತ್ತು ಕಾಫಿಯನ್ನು ಸೇವಿಸುವುದು ಮತ್ತು ತಂಪು ಪಾನೀಯಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಮಧುಮೇಹ ಪ್ರಮುಖುವಾಗಿ ಮಧುಮೇಹವು ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ತೊಂದರೆಗಳಿಂದ ಉಂಟಾಗುವ ಕಾಯಿಲೆಯಾಗಿದೆ. ಸಕ್ಕರೆ ಕಾಯಿಲೆಯು ವಂಶಪಾರಂಪರ್ಯದಿಂದ ಬರಬಹುದು. ಗ್ಲೂಕೋಸ್ ಒಂದು ಬಗೆಯ ಸಕ್ಕರೆಯಾಗಿದೆ, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಸಕ್ಕರೆ ಕಾಯಿಲೆಯನ್ನು ಮಹಾಮಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.