ಹೊಸದಿಗಂತ ಡಿಜಿಟಲ್ ಡೆಸ್ಕ್:
2008 ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾದ ಹಫೀಜ್ ಸಯೀದ್‌ನ ಆಪ್ತ ಸಹಚರರನ್ನು ಒಬ್ಬೊಬ್ಬರಂತೆ ಗುರಿಯಾಗಿಸಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ 15 ಕ್ಕೂ ಹೆಚ್ಚು ಕಮಾಂಡರ್‌ಗಳು, ಶಾರ್ಪ್ ಶೂಟರ್‌ಗಳು ಅಪರಿಚಿತ ಬಂದೂಕುಧಾರಿಗಳ ಹತ್ಯೆಗಳಿಗೆ ಬಲಿಯಾಗಿದ್ದಾರೆ.
ಈ ಕೊಲೆಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಉಳಿದಿದೆ. ಪಾಕಿಸ್ತಾನಿ ಸೇನೆ ಅಥವಾ ಸರ್ಕಾರವೇ ಈ ಕೃತ್ಯದಲ್ಲಿ ಭಾಗಿಯಾಗಿದೆಯೇ? ಅಥವಾ ಯಾವುದಾದರೂ ಬೇರೆ ಗುಪ್ತಚರ ಸಂಸ್ಥೆ ಇದರಲ್ಲಿ ಕೈವಾಡ ಹೊಂದಿದೆಯೇ? ಎನ್ನುವುದು ಇನ್ನು ತಿಳಿದಿಲ್ಲ.
ವರದಿಗಳ ಪ್ರಕಾರ, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ಇದು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರನ್ನು ತಂದಿದೆ. ಈ ಹಿನ್ನೆಲೆಯಲ್ಲಿ, ಲಷ್ಕರ್ ಸಂಘಟನೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಪಾಕಿಸ್ತಾನಿ ಸೇನೆ ತನ್ನದೇ ಆದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರಬಹುದು ಎಂಬ ಊಹೆ ಇದೆ.