ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಪತಿ ರಾಕೇಶ್ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದೆ.
ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸಿದ್ದ ಪತಿ ರಾಕೇಶ್ನನ್ನು ಬೆಂಗಳೂರು ಪೊಲೀಸರು ಪುಣೆಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆರೋಪಿ ರಾಕೇಶ್ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿ ರಾಕೇಶ್ ಹಲವು ವಿಚಾರಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಜೊತೆಗೆ ಹೊಂದಿಕೊಳ್ಳಲಿಲ್ಲ. ಬೆಂಗಳೂರಿಗೆ ಹೋಗುವ, ಅಲ್ಲಿಯೇ ಇಬ್ಬರು ಕೆಲಸ ಮಾಡುವ ಎಂದು ಒತ್ತಾಯ ಮಾಡಿ ಇಲ್ಲಿಗೆ ಕರೆಸಿದಳು. ಒಂದು ತಿಂಗಳಾದರೂ ಆಕೆಗೆ ಕೆಲಸ ಸಿಗಲಿಲ್ಲ. ಕೆಲಸ ಹುಡುಕಲು ಆಕೆಗೆ ಸಹಾಯ ಮಾಡಿದರೂ ನೀನು ನನಗೆ ಕೆಲಸ ಹುಡುಕಲು ಸಹಾಯ ಮಾಡಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದಳು ಎಂದು ಆರೋಪಿ ರಾಕೇಶ್ ಹೇಳಿದ್ದಾನೆ.
ಆಕೆಯದ್ದೇ ನಡೆಯಬೇಕು ಎನ್ನುವ ರೀತಿಯಲ್ಲಿ ಇದ್ದಳು. ಆ ದಿನ (ಮಾ.26) ರಂದು ಸಹ ಇದೇ ವಿಚಾರಗಳುಗೆ ಜೋರು ಜಗಳಕ್ಕೆ ಕಾರಣವಾದವು. ಈ ವೇಳೆ ಆಕೆ ನನಗೆ ಚಾಕುವಿನಿಂದ ಹೊಡೆದಳು. ಬಳಿಕ ನಾನು ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದೆ. ನಾನು ಸೆಲ್ಫ್ ಡಿಫೆನ್ಸ್ಗಾಗಿ ಕೊಲೆ ಮಾಡಿದೆ. ನಂತರ ಕೃತ್ಯ ಮುಚ್ಚಿಹಾಕಲು ಬ್ಯಾಗ್ಗೆ ತುಂಬಿದೆ. ಆದರೆ, ಮೃತದೇಹ ಸಾಗಿಸುವುದು ಕಷ್ಟವಾದ ಕಾರಣ ಅಲ್ಲಿಯೇ ಬಿಟ್ಟು ಹೋದೆ ಎಂದು ಬಾಯಿಬಿಟ್ಟಿದ್ದಾನೆ.