ಹೊಸದಿಗಂತ ವರದಿ,ಕಾರವಾರ:
ಅಧಿಕಾರದ ದರ್ಪದಿಂದ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ. ನಮಗೂ ಕಾಲ ಬರುತ್ತೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇವರಿಗೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಬ್ಬರಿಸಿದರು.
ಬೆಲೆ ಏರಿಕೆ ವಿರೋಧಿಸಿ ಭಾರತೀಯ ಜನತಾ ಪಕ್ಷ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಸಿದ್ಧರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಆಗೆಲ್ಲ ಸದನದಲ್ಲಿ ಕಾಂಗ್ರೆಸ್ಸಿಗರು ಏನೆಲ್ಲ ಮಾಡಿದರೂ ಸ್ಪೀಕರ್ ಅವರ ವಿರುದ್ಧ ಇಂತಹ ಅಸ್ತ್ರ ಪ್ರಯೋಗಿಸಲಿಲ್ಲ. ಆದರೆ ಈಗ ರಾಜಕೀಯ ಉದ್ದೇಶಕ್ಕಾಗಿ ನಮ್ಮ ಪಕ್ಷದ ಶಾಸಕರನ್ನು ಅಮಾನತ್ ಮಾಡಲಾಗಿದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ. ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಕಾರ್ಯಗಳನ್ನು ಮಾಡಿದ ಕಾಂಗ್ರೆಸ್ಸಿಗರಿಗೆ ತಕ್ಕ ಉತ್ತರ ಕೊಡುತ್ತೇವೆ ಕಾದು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ ವಿಪರೀತವಾಗಿದೆ. ಒಂದು ಕಡೆಯಿಂದ 2 ಸಾವಿರ ರೂ. ಕೊಟ್ಟ ಹಾಗೆ ಮಾಡಿ 15 ಸಾವಿರದಷ್ಟು ದೋಚುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಸರ್ಕಾರ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ಬೆಲೆ ಏರಿಕೆಯಿಂದ ಜನತೆ ಪ್ರತಿಯೊಂದು ವಸ್ತುವಿಗೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಮತ್ತಿತರು ನಾಯಕರು ಉಪಸ್ಥಿತರಿದ್ದರು.