ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಪಾಸ್ ಆಗಿದ್ದ ವಲಸೆ ಮತ್ತು ವಿದೇಶಿಯರ ಮಸೂದೆ 2025 ಅನ್ನು ಬುಧವಾರ ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ.
ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ಮಂಡಿಸಿದ್ದು, ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ನಿತ್ಯಾನಂದ ರೈ, ಪಶ್ಚಿಮ ಬಂಗಾಳದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಟಿಎಂಸಿ ಸರ್ಕಾರವ, ಅಕ್ರಮ ವಲಸಿಗರಿಗೆ ದೇಶ ಪ್ರವೇಶಿಸಲು ‘ಸಹಾಯ’ ಮಾಡಿದ್ದಾರೆ. ಮತದಾರರ ಪಟ್ಟಿ ಮತ್ತು ಪಡಿತರ ಚೀಟಿಗಳಲ್ಲಿ ಅವರ ಹೆಸರುಗಳನ್ನು ಸೇರಿಸುವ ಮೂಲಕ ದೇಶದಲ್ಲಿ ಅಕ್ರಮ ವಾಸ್ತವ್ಯಕ್ಕೆ ಅವಕಾಶ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.