ಹೊಸದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಕಿಂಗ್ ಪಿನ್ ಆರ್.ಡಿ. ಪಾಟೀಲ್ನನ್ನು ನಗರದ ಹೊರವಲಯದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ.ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಸರಣಿ ಅಶಿಸ್ತು ಮತ್ತು ವಿವಾದಗಳನ್ನು ಸೃಷ್ಟಿಸುತ್ತಿದ್ದ ಹಿನ್ನೆಲೆ ಕಾರಾಗೃಹ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.
ಕಳೆದ ತಿಂಗಳು ಕಲಬುರಗಿ ಜೈಲಿನಲ್ಲಿ ಕೈದಿಗಳು ಜೂಜಾಟವಾಡುತ್ತಿರುವ ಮತ್ತು ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಮಟ್ಟದ ಚರ್ಚೆ ಗ್ರಾಸವಾಗಿತ್ತು.ಈ ಎಲ್ಲ ಕೃತ್ಯಗಳ ಹಿಂದೆ ಆರ್.ಡಿ. ಪಾಟೀಲ್ ಕುಮ್ಮಕ್ಕಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು. ಅಷ್ಟೇ ಅಲ್ಲದೆ, ಜೈಲಿನ ವಾತಾವರಣವನ್ನು ಕೆಡಿಸುತ್ತಿದ್ದ ಆರೋಪ ಕೂಡಾ ಆತನ ಮೇಲಿತ್ತು.ಈ ಹಿನ್ನೆಲೆ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಅಧಿಕಾರಿಗಳ ವಿರುದ್ಧವೇ ಲಂಚದ ಆರೋಪ
ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧವೇ ಲಂಚದ ಆರೋಪ ಮಾಡಿದ್ದ ಆರ್.ಡಿ. ಪಾಟೀಲ್, ಬಳಿಕ ಪೆನ್ ಡ್ರೈವ್ ಮೂಲಕ ಅಕ್ರಮಗಳ ವಿಡಿಯೋ ವೈರಲ್ ಮಾಡಿಸಿ ಇಲಾಖೆಗೆ ಮುಜುಗರ ತಂದಿದ್ದ. ಈ ಬೆಳವಣಿಗೆಗಳ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಖುದ್ದು ಕಲಬುರಗಿ ಜೈಲಿಗೆ ಭೇಟಿ ನೀಡಿ ಸವಿಸ್ತಾರ ತನಿಖೆಗೆ ಆದೇಶಿಸಿದ್ದರು.



