ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಗೆ ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯೇ ‘ಸುಪ್ರೀಂ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಕುರಿತಂತೆ ನಾವು ಮಸೂದೆ ಮಾಡಿ, ಎರಡೂ ಸದನಗಳಲ್ಲಿ ಅಂಗೀಕರಿಸಿದ್ದೇವೆ. ಈ ಮಸೂದೆಯನ್ನು ಎಲ್ಲರೂ ಒಪ್ಪಿದ್ದಾರೆ. ಈಗ ತಾವು ಹೇಳಿದ್ದೇ ನಡೆಯಬೇಕೆಂದು ರಾಜ್ಯಪಾಲರು ಹೇಳುತ್ತಿದ್ದಾರೆ ಹಾಗಿದ್ದರೆ, ಸದನ ಅಂಗೀಕರಿಸಿದ ಮಸೂದೆಗೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕುಲಪತಿ ನೇಮಕ ವಿಚಾರದಲ್ಲಿ ಮುಕ್ತ ಅವಕಾಶಕ್ಕಾಗಿ ನಿಯಮ ರೂಪಿಸಲು ಮಸೂದೆ ಮಾಡಿದ್ದೇವೆ. ಸದ್ಯದ ನೇಮಕಾತಿ ಪ್ರಕ್ರಿಯೆ ಪ್ರಕಾರ ಕಡತ ರಾಜ್ಯಪಾಲರ ಬಳಿ ಹೋಗಬೇಕು ಎಂದರು.