ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಮರ ಓಲೈಕೆಗಾಗಿ ಸಿಎಂ ಸಿದ್ದರಾಮಯ್ಯ ಕರ್ನಾಟಕವನ್ನು ಮಿನಿ ಪಾಕಿಸ್ತಾನವಾಗಿಸಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಇದು ಬಿಜೆಪಿಯ ಆಕ್ರೋಶದ ಯಾತ್ರೆಯಲ್ಲ, ಜನರ ಆಕ್ರೋಶದ ಯಾತ್ರೆ. ಬೆಲೆ ಏರಿಕೆಯಿಂದಾಗಿ ಜನರಿಗೆ ತೊಂದರೆಯಾಗಿರುವುದರಿಂದ ಅವರಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ಗುಡುಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆ. ಮುಸಲ್ಮಾನರು ನಂ.1 ಎಂದು ಆಗಲು ವಿದೇಶ ಕೈವಾಡ ಇದೆಯೇ ಎಂಬ ಅನುಮಾನ ಬಂದಿದೆ. ಮುಸ್ಲಿಮರ ಓಲೈಕೆಗಾಗಿ ಎಲ್ಲ ಜಾತಿಗಳನ್ನು ಒಡೆದುಹಾಕಿದ್ದಾರೆ. ಈ ಮೂಲಕ ಮಿನಿ ಪಾಕಿಸ್ತಾನ ಸೃಷ್ಟಿಸುತ್ತಿದ್ದಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆಂದು ಕೆಲವು ಭಯೋತ್ಪಾದಕರು ಪತ್ರದಲ್ಲಿ ಬರೆದು ಹಂಚಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ನವೆಂಬರ್ನಲ್ಲಿ ಬಾಂಬ್ ಫಿಕ್ಸ್ ಆಗಿದೆ. ಅವರು ನಿರ್ಗಮಿಸುವುದರಿಂದಲೇ ಈ ರೀತಿ ಮಾಡುತ್ತಿದ್ದಾರೆ. ರಾಜ್ಯದ ಬಡವರ ಮೇಲೆ ತೆರಿಗೆಯ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣ ಕೇಂದ್ರ ಕಾಂಗ್ರೆಸ್ನ ಎಟಿಎಂ ಆಗಿದೆ. ಇದು ಕುರ್ಚಿ ಕಿತ್ತುಕೊಳ್ಳಲು ನಡೆಯುತ್ತಿರುವ ರಾಜಕೀಯ ಎಂದರು.