ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ‘ಅಶ್ಲೀಲ ಮತ್ತು ಅಸಭ್ಯ’ ಹೇಳಿಕೆ ನೀಡಿದ ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ, ಕಳೆದ ಕೆಲವು ತಿಂಗಳು ಕಠಿಣ ಸಮಯವಾಗಿತ್ತು. ಈ ವಿವಾದ ತನ್ನ ಮೇಲೆ ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಪರಿಣಾಮ ಬೀರಿತು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ವೈರಲ್ ಆಯಿತು ಮತ್ತು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ನಂತರ, ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ, ಯೂಟ್ಯೂಬರ್ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ ಮತ್ತು ಜಸ್ಪ್ರೀತ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮಹಾರಾಷ್ಟ್ರ ಮತ್ತು ಅಸ್ಸಾಂ ಪೊಲೀಸರಿಂದ ಹಲವಾರು ಎಫ್ಐಆರ್‌ಗಳು ದಾಖಲಾದವು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇದು ಅಪ್ರಾಪ್ತರಿಗೆ ಹಾನಿಕಾರಕ ಎಂದಿತು.
ಇತ್ತ ಇನ್‌ಸ್ಟಾಗ್ರಾಂ ಪ್ರಶ್ನೋತ್ತರ ಅವಧಿಯಲ್ಲಿ, ಅಲ್ಹಾಬಾದಿಯಾ ಅವರು ಘಟನೆಯಿಂದ ಏನು ಕಳೆದುಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ , ಆರೋಗ್ಯ, ಹಣ, ಅವಕಾಶ, ಖ್ಯಾತಿ, ಮಾನಸಿಕ ಆರೋಗ್ಯ, ಶಾಂತಿ, ಪೋಷಕರ ನೆಮ್ಮದಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಕಳೆದುಕೊಂಡಿರುವೆ. ಈ ಮಧ್ಯೆ, ಪರಿವರ್ತನೆ, ಆಧ್ಯಾತ್ಮಿಕ ಬೆಳವಣಿಗೆ, ದೃಢತೆಯನ್ನು ಪಡೆದುಕೊಂಡಿದ್ದೇನೆ. ಕಳೆದುಹೋದ ಎಲ್ಲವನ್ನೂ ಮರಳಿ ಪಡೆಯುವತ್ತ ನಿಧಾನವಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾತನಾಡಲಿ’ ಎಂದಿದ್ದಾರೆ.
ನನ್ನ ತಪ್ಪಿನಿಂದಾಗಿ ನನ್ನ ತಂಡದ ಸದಸ್ಯರ ಕುಟುಂಬಗಳು ಕೂಡ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಎಷ್ಟು ಜನರ ಉದ್ಯೋಗಗಳು ಅಪಾಯದಲ್ಲಿವೆ ಎಂಬುದು ಹೊರಗಿನವರಿಗೆ ಅರ್ಥವಾಗುತ್ತಿಲ್ಲ. ನನ್ನ ವೃತ್ತಿಜೀವನದ ಮೇಲೆ ದೊಡ್ಡ ಹೊಡೆತ ಬಿತ್ತು ಮತ್ತು ಅದರಿಂದಾಗಿ ನನ್ನನ್ನು ಅವಲಂಬಿಸಿದ್ದ 300ಕ್ಕೂ ಅಧಿಕ ಜನರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿದೆ. ಇಂತಹ ಸಂದರ್ಭಗಳಲ್ಲಿ ಜನರು ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ತಿಳಿಯಿತು. ಯಾರಾದರೂ ಬೀಳುವುದನ್ನು ನೋಡಲು ಜನರು ಇಷ್ಟಪಡುತ್ತಾರೆ. ಆದರೆ, ನಾವು ಮುಂದುವರಿಯುತ್ತೇವೆ. ಅನೇಕರ ಜೀವನ ನನ್ನ ಕೆಲಸದ ಮೇಲೆ ಅವಲಂಬಿತವಾಗಿರುವುದರಿಂದ ನಾನು ಎಲ್ಲವನ್ನೂ ನೀಡಬೇಕಾಗಿದೆ ಎಂದಿದ್ದಾರೆ.