ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗಳ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶಿಸಿದೆ.
ಕಳೆದ ವಾರ ಭುಗಿಲೆದ್ದ ಹಿಂಸಾಚಾರದಲ್ಲಿ ತಂದೆ-ಮಗ ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ನಿಂದ ಹಿಂದುಗಳು ಜೀವ ಭಯದಿಂದ ನದಿ ದಾಟಿ ಬೇರೆಡೆಗೆ ಹೋಗಿದ್ದಾರೆ.
ಹಿಂಸಾಚಾರ ಭುಗಿಲೆದ್ದಿದ್ದು, ಎಚ್ಚೆತ್ತುಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರ ಘಟನೆ ಕುರಿತಂತೆ ತನಿಖೆ ನಡೆಸಲು, ಗುಪ್ತಚರ ಶಾಖೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉಪ ಸೂಪರಿಂಟೆಂಡೆಂಟ್‌ಗಳು, ದಂಗೆ ನಿಗ್ರಹ ಪಡೆ (ಸಿಐಎಫ್), ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ಸುಂದರಬನ್ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಒಳಗೊಂಡು ಒಂಬತ್ತು ಸದಸ್ಯರುಳ್ಳ ತಂಡವನ್ನು ರಚಿಸಿದೆ.
ಏಪ್ರಿಲ್ 11 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಒಂದು ಸಮುದಾಯದವರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ವೇಳೆ ತಂದೆ-ಮಗ ಇಬ್ಬರು ಸಾವನ್ನಪ್ಪಿದರು. ಪೊಲೀಸ್ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಹತನಾಗಿದ್ದಾನೆ. ಹಲವಾರು ಜನರು ಗಾಯಗೊಂಡಿದ್ದಾರೆ. ವ್ಯಾಪಕ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ ಬಳಿಕ ಗಲಭೆಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಪಿಎಫ್, ರಾಜ್ಯ ಪೊಲೀಸರು ಮತ್ತು ಜಂಟಿ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದ್ದೇವೆ. ನಿಯಂತ್ರಣ ಕೊಠಡಿಯನ್ನು ತೆರೆದಿದ್ದೇವೆ. ಸಮಸ್ಯೆ ಎದುರಾದಲ್ಲಿ ಸಂಪರ್ಕಿಸಲು ಕೋರಲಾಗಿದೆ ಎಂದು ದಕ್ಷಿಣ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಪ್ರತಿಮ್ ಸರ್ಕಾರ್ ತಿಳಿಸಿದ್ದಾರೆ.