ಪರೀಕ್ಷೆಗೆ ಮುನ್ನ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಇಬ್ಬರು ಸಿಬ್ಬಂದಿ ಅಮಾನತು

ಹೊಸದಿಗಂತ ವರದಿ ಶಿವಮೊಗ್ಗ

ನಗರದ ಖಾಸಗಿ ಶಿಕ್ಷಣ ಶಾಲೆಯಲ್ಲಿ ಇತ್ತೀಚಿಗೆ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು  ಅಮಾನತು ಮಾಡಿರುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ಜನಿವಾರ ಪ್ರಕರಣದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿ ಟಿವಿ ವಿಡಿಯೋ ಸಂಪೂರ್ಣವಾಗಿ ಪರಿಶೀಳಿಸಲಾಗಿದೆ. ಸಿಸಿ ಟಿವಿ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಬರುತ್ತಾರೆ, ಇಬ್ಬರು ಸೆಕ್ಯೂರಿಟಿಗಳಿಗೆ ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾರೆ. ಇದಕ್ಕೆ ಅನುಮತಿ ಇದೆಯೇ ಎಂದಾಗ, ಆಗ ಸೆಕ್ಯೂರಿಟಿರವರು ಇಲ್ಲ ಎನ್ನುತ್ತಾರೆ. ಆ ವಿದ್ಯಾರ್ಥಿಯೇ ಪಕ್ಕಕ್ಕೆ ಹೋಗಿ ಜನಿವಾರ ತೆಗೆದು ಬರುತ್ತಾರೆ. ಇನ್ನೋರ್ವ ವಿದ್ಯಾರ್ಥಿ ಬಂದಾಗ  ಸೆಕ್ಯೂರಿಟಿ ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ಅವಕಾಶ ಇಲ್ಲ ಎಂದಾಗ, ವಿದ್ಯಾರ್ಥಿ ಇಲ್ಲ ನಾನು ಜನಿವಾರ ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

ಪರೀಕ್ಷಾರ್ಥಿಯನ್ನು ಸೆಕ್ಯೂರಿಟಿ ಪರೀಕ್ಷಾ ಕೇಂದ್ರದ ಒಳಗೆ ಬಿಡದೆ ಅಲ್ಲೆ ಕೂರಿಸುತ್ತಾರೆ.  ಆಗ ಕಾಲೇಜಿನ ಪ್ರಾಂಶುಪಾಲರು ಬಂದು ವಿದ್ಯಾರ್ಥಿ ಕುಳಿತುಕೊಂಡಿರುವ ಕುರಿತು ವಿಚಾರಿಸಿದಾಗ ಜನಿವಾರದ ವಿಚಾರವನ್ನು ಸೆಕ್ಯೂರಿಟಿರವರು ಹೇಳಿದಾಗ ಸಂಪ್ರದಾಯಕ್ಕೆ ಅಡ್ಡಿ ಪಡಿಸುವ ಯಾವುದೇ ಕ್ರಮ ಇಲ್ಲ. ವಿದ್ಯಾರ್ಥಿ ಹೋಗಿ ಪರೀಕ್ಷೆ ಬರೆಯಬಹುದು ಎಂದು ಹೇಳಿ ವಿದ್ಯಾರ್ಥಿಯನ್ನು‌ ಪರೀಕ್ಷೆ ಬರೆಯಲು ಒಳಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.

ಇಲ್ಲಿ ಪರೀಕ್ಷೆ ಬರೆಯಲು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದಿಲ್ಲ. ಸರಿಯಾದ ಸಮಯಕ್ಕೆ ಹೋಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆಯಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಆಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಅಲ್ಲದೆ, ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಸಮಯ ಪ್ರಜ್ಞೆ ಹಾಗೂ ಸಕಾಲಿಕಾ ಕ್ರಮಗಳಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಆಗಿಲ್ಲ. ಆದರೆ ಇಬ್ಬರು ಸೆಕ್ಯೂರಿಟಿ ರವರ ತಿಳುವಳಿಕೆಯ ಕೊರತೆಯಿಂದ ಈ ರೀತಿಯ ಘಟನೆ ನಡೆದಿದೆ.

ಜನಿವಾರ ಪ್ರಕರಣದ ಕುರಿತು ಸೂಕ್ತ ತನಿಖೆಗೆ ಅದೇಶಿಸಲಾಗಿದೆ ಅಲ್ಲದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಇಲ್ಲಿ ಜನಿವಾರವನ್ನು ಕತ್ತರಿಸಿ, ಕಸದ ಬುಟ್ಟಿಗೆ ಎಸೆಯುವ ಯಾವ ಕುಕೃತ್ಯವೂ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಜನಿವಾರ ತೆಗೆದುಕೊಂಡು ಬನ್ನಿ ಎನ್ನುವುದು ಸಹ ಒಪ್ಪುವಂತದ್ದು ಅಲ್ಲ. ಈ ಜನಿವಾರದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದರು.

ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಟ್ ಅಮಾನತು ಮಾಡಿದ್ದಾರೆ.  ಅಮಾನತು ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!