ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥಗಳನ್ನು ಒಳಗೊಂಡ ಚಾರ್ ಧಾಮ್ ಯಾತ್ರೆ 2025 ರ (Char Dham Yatra 2025) ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು, ಈ ವೇಳೆ ಧಾರ್ಮಿಕ ಯಾತ್ರಿಕರು ಹಾಗೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ಬುಕಿಂಗ್ ವಂಚನೆ ಜಾಲ ಹೆಚ್ಚಳವಾಗುವ ಸಾಧ್ಯತೆ ಇದ್ದು, ಹೀಗಾಗಿ
ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ.
ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C), ಧಾರ್ಮಿಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದು, ಉತ್ತರಾಖಂಡದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಸಾವಿರಾರು ಭಕ್ತರು ತಯಾರಿ ನಡೆಸುತ್ತಿರುವ ಸಮಯದಲ್ಲಿ ಎಚ್ಚರಿಕೆ ನೀಡಿದೆ.
ಅಸಲಿ ಸೇವಾ ಪೂರೈಕೆದಾರ ವೆಬ್ಸೈಟ್ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸುವ ಮೂಲಕ ಯಾತ್ರಾರ್ಥಿಗಳ ಧಾರ್ಮಿಕ ಭಾವನೆಗಳು ಮತ್ತು ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಕೇದಾರನಾಥಕ್ಕೆ ಹೆಲಿಕಾಪ್ಟರ್ ಬುಕಿಂಗ್, ಅತಿಥಿ ಗೃಹ ಮತ್ತು ಹೋಟೆಲ್ ಕಾಯ್ದಿರಿಸುವಿಕೆಗಳು, ಕ್ಯಾಬ್ ಅಥವಾ ಟ್ಯಾಕ್ಸಿ ಸೇವಾ ಬುಕಿಂಗ್‌ಗಳು ಮತ್ತು ಸಂಪೂರ್ಣ ರಜಾ ಅಥವಾ ಧಾರ್ಮಿಕ ಪ್ರವಾಸ ಪ್ಯಾಕೇಜ್‌ಗಳಂತಹ ಸೇವೆಗಳ ಜಾಹೀರಾತು ನೀಡಿ ಜನರನ್ನು ಮರುಳು ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ.
ಜನರನ್ನು ಆಕರ್ಷಿಸಲು ರಿಯಾಯಿತಿ ದರಗಳನ್ನು ನೀಡುತ್ತಾರೆ. ಅಸ್ತಿತ್ವದಲ್ಲಿಲ್ಲದ ಸೇವೆಗಳಿಗೆ ಮುಂಗಡ ಪಾವತಿಗಳನ್ನು ಮಾಡುವಂತೆ ಮಾಡಿ ಹಣ ಲಪಟಾಯಿಸುತ್ತಾರೆ ಎಂದು ಎಚ್ಚರಿಕೆ ಸಂದೇಶದಲ್ಲಿ ಸಚಿವಾಲಯ ಉಲ್ಲೇಖಿಸಿದೆ.
ಧಾರ್ಮಿಕ ಯಾತ್ರಾರ್ಥಿಗಳು ಅಥವಾ ಇತರ ಪ್ರವಾಸಿಗರು ಅಧಿಕೃತ ಪೋರ್ಟಲ್‌ಗಳು ಮತ್ತು ಸರ್ಕಾರಿ-ಅಧಿಕೃತ ವೆಬ್ಸೈಟ್ಗಳ ಮೂಲಕ ಮಾತ್ರ ಬುಕಿಂಗ್ ಮಾಡುವಂತೆ ಸಚಿವಾಲಯ ಶಿಫಾರಸು ಮಾಡಿದೆ.ಯಾವುದೇ ಅನುಮಾನಾಸ್ಪದ ವೆಬ್‌ಸೈಟ್‌ಗಳು ಅಥವಾ ಜಾಹೀರಾತುಗಳು ಗಮನಕ್ಕೆ ಬಂದಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್‌ಗೆ (www.cybercrime.gov.in) ದೂರು ನೀಡುವಂತೆ ಸೂಚಿಸಲಾಗಿದೆ. ಇದರಿಂದಾಗಿ ಅಂತಹ ಚಟುವಟಿಕೆಗಳನ್ನು ತಡೆಯುವ ಕಾರ್ಯದಲ್ಲಿ ಇಲಾಖೆಗೆ ಸಹಾಯವಾಗುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.