ಹೊಸದಿಗಂತ ವರದಿ, ಧಾರವಾಡ:
ನಗರದ ಹುರಕಡ್ಲಿ ಅಜ್ಜ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ತಮ್ಮ ಕೊರಳಿಂದ ಪೊಲೀಸರು ಜನಿವಾರ ತೆಗೆಸಿದ್ದಾಗಿ ಜನತಾ ಶಿಕ್ಷನ ಸಮಿತಿ ಆರ್.ಎಸ್.ಹುಕ್ಕೇರಿಕರ ಕಾಲೇಜು ವಿದ್ಯಾರ್ಥಿ ನಂದನ್ ಏರಿ ಆಪಾದಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿಇಟಿ ಮೊದಲ ದಿನ ಭೌತ-ವಿಜ್ಞಾನ ಪರೀಕ್ಷೆಗೆ ಹೋದಾಗ ಜನಿವಾರ ತೆಗೆಸಿದ ಕತ್ತರಿ ತಂದು ಕತ್ತರಿಸಿದ್ದಾರೆ. ನಂತರ ಪರೀಕ್ಷಾ ಕೊಠಡಿ ಒಳಗೆಡೆ ಅನುಮತಿ ನೀಡಿದ್ದಾಗಿ ದೂರಿದ್ದಾರೆ.
ರಾಘವೇಂದ್ರ ನಗರದ ವಿದ್ಯಾರ್ಥಿ ನಂದನ್ ಏರಿ ಮನೆಗೆ ಭಾನುವಾರ ಭೇಟಿ ನೀಡಿದ ಶ್ರೀರಾಮ ಸೇನೆ ರಾಷ್ಟ್ರೀಯಅಧ್ಯಕ್ಷರಾದ ಪ್ರಮೋದ ಮುತಾಲಿಕ್, ಜನಿವಾರ ತೆಗೆಸಿದ್ದು ಅಕ್ಷಮ್ಯ. ಈ ಕುರಿತು ಪಿಐಎಲ್ ಸಲ್ಲಿಸುವುದಾಗಿಯೂ ಹೇಳಿದರು.
ಶಿವಮೊಗ್ಗ, ಬೀದರ್ ಹಾಗೂ ಧಾರವಾಡ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಗಳು ವರದಿ ಆಗಿದ್ದು, ಈ ಕುರಿತು ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.