ಉಗ್ರ ದಾಳಿ ಭೀತಿ; ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸದಂತೆ ಅಮೆರಿಕ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಭಯೋತ್ಪಾದನಾ ದಾಳಿಗಳು’ ಮತ್ತು ‘ಸಂಭಾವ್ಯ ನಾಗರಿಕ ಹಿಂಸಾತ್ಮಕ ದಾಳಿ’ಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತ-ಪಾಕಿಸ್ತಾನ ಗಡಿಯಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶಗಳಿಗೆ ಪ್ರಯಾಣ ಕೈಗೊಳ್ಳಬೇಡಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.

ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದಿದ್ದು, 2019ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದಾದ ಒಂದು ದಿನದ ನಂತರ ಬುಧವಾರ ಎಲ್ಲ ಅಮೆರಿಕದ ನಾಗರಿಕರಿಗೆ ಈ ಎಚ್ಚರಿಕೆ ನೀಡಲಾಗಿದೆ.

‘ಭಯೋತ್ಪಾದಕ ದಾಳಿಗಳು ಮತ್ತು ಹಿಂಸಾತ್ಮಕ ಅಶಾಂತಿಯ ಸಾಧ್ಯತೆ ಇರುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ (ಪೂರ್ವ ಲಡಾಖ್ ಮತ್ತು ಲೇಹ್ ಹೊರತುಪಡಿಸಿ) ಪ್ರಯಾಣಿಸದಂತೆ ಅಮೆರಿಕ ವಿದೇಶಾಂಗ ಇಲಾಖೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಶ್ರೀನಗರ, ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಂತಹ ಪ್ರವಾಸಿ ತಾಣಗಳಲ್ಲಿ ಅನಿರೀಕ್ಷಿತ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇದು ಸಾಮಾನ್ಯವಾಗಿದೆ’ ಎಂದು ಸಲಹೆ ನೀಡಿದೆ.

‘ಸಶಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ’ ಭಾರತ-ಪಾಕಿಸ್ತಾನ ಗಡಿಯಿಂದ 10 ಕಿಲೋಮೀಟರ್ ವ್ಯಾಪ್ತಿಯ ಒಳಗೆ ಪ್ರಯಾಣ ಬೆಳೆಸುವುದನ್ನು ತಪ್ಪಿಸುವಂತೆ ತನ್ನ ನಾಗರಿಕರಿಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!