ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಕೇಂದ್ರ ಸರ್ಕಾರವು ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದು, ಅದ್ರ ಭಾಗವಾಗಿ ವಿದೇಶಾಂಗ ಸಚಿವಾಲಯ ಪಾಕಿಸ್ತಾನಿಗಳಿಗೆ ನೀಡಲಾದ ಎಲ್ಲಾ ಅಸ್ತಿತ್ವದಲ್ಲಿರುವ ವೀಸಾಗಳನ್ನು ರದ್ದುಗೊಳಿಸಿದೆ.
ಇತ್ತ ಈ ಬೆಳವಣಿಗೆಗಳ ನಡುವೆ, ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಭಾರತವನ್ನು ತೊರೆಯಬೇಕೇ? ಎಂಬ ಚರ್ಚೆ ನಡೆದಿದೆ. ಪಾಕಿಸ್ತಾನದ ಸಿಂಧ್‌ನ 27 ವರ್ಷದ ಮಹಿಳೆ ಸೀಮಾ ಹೈದರ್ ಕೊವಿಡ್-19 ಸಮಯದಲ್ಲಿ ಆನ್‌ಲೈನ್ ಗೇಮ್ PUBG ಮೂಲಕ ಭಾರತದ 22 ವರ್ಷದ ಅಂಗಡಿ ಸಹಾಯಕ ಸಚಿನ್ ಮೀನಾ ಅವರೊಂದಿಗೆ ಸಂಪರ್ಕ ಬೆಳೆಸಿದ್ದರು. ಆರಂಭಿಕ ಭೇಟಿಗಳ ನಂತರ, ಸೀಮಾ ಮೇ 2023ರಲ್ಲಿ ದುಬೈ ಮತ್ತು ನೇಪಾಳದ ಮೂಲಕ ತನ್ನ ಮೊದಲ ಮದುವೆಯಿಂದ 4 ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಅವರು ಈಗ ಸಚಿನ್ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಈ ವರ್ಷ ಮಗಳು ಕೂಡ ಹುಟ್ಟಿದ್ದಾಳೆ.
ಇದೀಗಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ನಿರ್ಧಾರಗಳು ಸೀಮಾಗೆ ಅನ್ವಯವಾಗುತ್ತದೆಯೇ? ಎಂಬ ಚರ್ಚೆಗಳು ನಡೆದಿವೆ.
ಈ ಬಗ್ಗೆ ಸೀಮಾ ಹೈದರ್ ಪ್ರತಿಕ್ರಿಯಿಸಿದ್ದು, ನಾನು ಪಾಕಿಸ್ತಾನದ ಮಗಳಾಗಿದ್ದೆ, ಆದರೆ ಈಗ ನಾನು ಭಾರತದ ಸೊಸೆ ಎಂದು ಸೀಮಾ ಹೈದರ್ ಹೇಳಿದ್ದಾರೆ.