ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕ್ ಗೆ ಭಾರತದಿಂದ ಯುದ್ಧ ಭೀತಿ ಎದುರಾಗಿದ್ದು, ಇದು ಪಾಕಿಸ್ತಾನ ಷೇರುಮಾರುಕಟ್ಟೆ ಕುಸಿತಕ್ಕೂ ಕಾರಣವಾಗಿದೆ.
ಪಾಕಿಸ್ತಾನ ಷೇರು ವಿನಿಮಯ ಕೇಂದ್ರ PSX (Pakistan Stock Exchange) ಸೂಚ್ಯಂಕ ಇಂದು ಒಂದೇ ದಿನ ಬರೊಬ್ಬರಿ 3,545.61 ಅಂಕಗಳು ಅಂದರೆ ಶೇ. 3.09ರಷ್ಟು ಕುಸಿತ ಕಂಡು 111,326.57 ಅಂಕಗಳಿಗೆ ಕುಸಿತವಾಗಿದೆ. ಹಿಂದಿನ ದಿನ 114,872.18 ಅಂಕಗಳಷ್ಟಿದ್ದ ಪಿಎಸ್ಎಕ್ಸ್ ಸೂಚ್ಯಂಕ ಇಂದು 3,545.61 ಅಂಕಗಳ ಕುಸಿತಗೊಂಡು 111,326.57 ಅಂಕಗಳಿಗೆ ಕುಸಿತವಾಗಿದೆ.
ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ನಿನ್ನೆ ತಡರಾತ್ರಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದ ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಟ್ಟಾ ತರಾರ್, ಮುಂದಿನ 24ರಿಂದ 36 ಗಂಟೆಯೊಳಗೆ ಭಾರತ ಪಾಕಿಸ್ತಾನದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ತಲ್ಲಣ ಆರಂಭವಾಗಿದೆ. ಇದು ಪಾಕಿಸ್ತಾನ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಎಕೆಡಿ ಸೆಕ್ಯುರಿಟೀಸ್ನ ಸಂಶೋಧನಾ ನಿರ್ದೇಶಕ ಅವೈಸ್ ಅಶ್ರಫ್, ‘ಪಾಕಿಸ್ತಾನದ ವಿರುದ್ಧ ಭಾರತ ನಡೆಸುವ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದಾರೆ, ಮಾಹಿತಿ ಸಚಿವರ ಪತ್ರಿಕಾಗೋಷ್ಠಿಯ ನಂತರ ಈ ಕಳವಳಗಳು ತೀವ್ರಗೊಂಡಿವೆ” ಎಂದು ಹೇಳಿದರು.