ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಫಿಲ್ಮ್ ಚೇಂಬರ್ನ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕೂಡ ಸೋನು ನಿಗಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೀಗಾಗಿ ಸೋಮವಾರ ನಿರ್ಮಾಪಕ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಸೇರಿ ಸಭೆ ನಡೆಸಲಿವೆ. ಈ ಸಭೆಯಲ್ಲಿ ಸೋನು ನಿಗಮ್ಗೆ ಇನ್ಮುಂದೆ ಕನ್ನಡ ಚಿತ್ರದಲ್ಲಿ ಹಾಡಲು ಅವಕಾಶ ಕೊಡಬೇಕಾ ಬೇಡ್ವಾ? ಎಂಬ ತೀರ್ಮಾನ ಕೈಗೊಳ್ಳಲಿವೆ
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೋನು ನಿಗಮ್ ಹೇಳಿಕೆಯನ್ನ ಖಂಡಿಸಿದ್ದು, ಇನ್ಮುಂದೆ ಕನ್ನಡದಲ್ಲಿ ಹಾಡಲು ಅವರಿಗೆ ಅವಕಾಶ ಕೊಡಬಾರದೆಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ, ಕನ್ನಡ ಹಾಡು ಹಾಡುವಂತೆ ಪ್ರೇಕ್ಷಕರು ಕೇಳಿದ್ದಕ್ಕೆ, ಕನ್ನಡ… ಕನ್ನಡ… ಇಂಥ ಮನಸ್ಥಿತಿಯಿಂದಲೇ ಪಹಲ್ಗಾಮ್ನಲ್ಲಿ ದಾಳಿಯಾಗಿದ್ದು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ವಿವಾದ ಜೋರಾಗುತ್ತಿದ್ದಂತೆ, ಅವರ ವಿರುದ್ಧ ದೂರು ದಾಖಲಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.
ಸ್ಪಷ್ಟನೆ ನೀಡಿದ ಸೋನು ನಿಗಮ್
ಇತ್ತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸೋನು ನಿಗಮ್ ಸ್ಪಷ್ಟನೆ ನೀಡಿದ್ದು, ಕನ್ನಡಿಗರು ಒಳ್ಳೆಯವರು, ಆದರೆ ಕಾರ್ಯಕ್ರಮದಲ್ಲಿ ನನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಕೇಳಿದ್ದರು. ಅದಕ್ಕಾಗಿ ನಾನು ಆ ನಾಲ್ವರು ಯುವಕರನ್ನ ಉದ್ದೇಶಿಸಿ ಮಾತನಾಡಿದ್ದೆ. ಇದು ಎಲ್ಲಾ ಕನ್ನಡಿಗರಿಗೆ ಹೇಳಿದ ಮಾತಲ್ಲ, ಪಹಲ್ಗಾಮ್ನಲ್ಲಿ ಉಗ್ರರು ಭಾಷೆ ಕೇಳಲಿಲ್ಲ, ಧರ್ಮ ಕೇಳಿ ಕೊಂದರು ಎಂದು ಹೇಳಿಕೊಂಡಿದ್ದಾರೆ.