ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಕಠಿಣವಾದ ಕಾನೂನು ಇದ್ದರೂ ಕೆಲವು ಕಡೆ ಕೊಲೆ, ಗುಂಪು ಘರ್ಷಣೆ ಪ್ರಕರಣಗಳು ನಡೆಯುತ್ತಿವೆ. ಅದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಕೊಲೆ ಪ್ರಕರಣದ ಕುರಿತು ನಾನು ಯಾರನ್ನೂ ದೂಷಿಸುವುದಿಲ್ಲ. ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಅದು ಸತ್ಯವಾಗಿದ್ದರೆ, ಕಾನೂನು ಮೀರಿ ಯಾರಾದರೂ ಕೆಲಸ ಮಾಡಿದರೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡುತ್ತಿಲ್ಲ ಎನ್ನುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಹೇಳಿಕೆಯಲ್ಲಿ ಹುರುಳಿಲ್ಲ. ಸಂದರ್ಭ ಬಂದಾಗ ಅವರಿಗೆ ಅಂಕಿ-ಸಂಖ್ಯೆ ಸಮೇತ ಉತ್ತರ ನೀಡುತ್ತೇನೆ ಎಂದರು.