ಮಡಿಕೇರಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಮಾರುತಿ ಓಮ್ನಿ ಮೇಲೆ ಕಾಡಾನೆ ದಾಳಿ

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಮಾರುತಿ ಓಮ್ನಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಭಾನುವಾರ ರಾತ್ರಿ ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡುವಿನಲ್ಲಿ ನಡೆದಿದೆ.

ಘಟನೆಯಲ್ಲಿ ಗದಗ ಮೂಲದ ಷರೀಫ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ವ್ಯಾನ್’ನಲ್ಲಿದ್ದ ಇತರ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲತಃ ಗದಗ ಜಿಲ್ಲೆಯವರಾದ ಷರೀಫ್ ಎಂಬವರು ಮಡಿಕೇರಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದು, ಊರಿನಲ್ಲಿ ನಡೆಯಲಿರುವ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲೆಂದು ಭಾನುವಾರ ರಾತ್ರಿ ಮಾರುತಿ ಓಮ್ನಿ ವ್ಯಾನ್’ನಲ್ಲಿ ಹೊರಟಿದ್ದರು.

ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಅರಣ್ಯ ಡಿಪೋ ಬಳಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿದ್ದುದನ್ನು ಕಂಡ ಷರೀಫ್ ತಮ್ಮ ವಾಹನವನ್ನು ನಿಲ್ಲಿಸಿದರಾದರೂ, ರಸ್ತೆ ದಾಟುತ್ತಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಹೆಣ್ಣಾನೆಯೊಂದು ಇವರಿದ್ದ ವ್ಯಾನ್ ಮೇಲೆ ಎರಗಿದೆ.

ಆನೆಯ ಆಕ್ರೋಶಕ್ಕೆ ವ್ಯಾನ್ ನಜ್ಜುಗುಜ್ಜಾಗಿದ್ದು, ಒಳಗಿದ್ದವರ ಪೈಕಿ ಷರೀಫ್ ಗಂಭೀರವಾಗಿ ಗಾಯಗೊಂಡರೆ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು‌ ಮತ್ತು ಅವರ ಬಾವನವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನೆ ನಡೆದ ಸಂದರ್ಭ ಆ ಮಾರ್ಗವಾಗಿ ಕುಶಣಾಲನಗರದಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದ ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಅವರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕುಶಾಲನಗರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!