ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆಯೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಇದರ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಎಸ್’ಸಿ, ಆಯೋಗದ ವತಿಯಿಂದ ಮೇ 05 ರಂದು ನಡೆಸಲಾದ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯ ಪ್ರಬಂಧ ಪತ್ರಿಕೆಯ ಪರೀಕ್ಷೆಯ ಸಂದರ್ಭದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಕಸ್ತೂರ ಬಾ ನಗರದ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ಕೆಲವು ಸಮೂಹ ಮಾಧ್ಯಮಗಳು ವರದಿ ಮಾಡಿವೆ.
ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಪರೀಕ್ಷಾ ಉಪ ಕೇಂದ್ರದ ಮೇಲ್ವಿಚಾರಕರು ಮತ್ತು ಆಯೋಗದಿಂದ ನಿಯೋಜಿತರಾದ ಸ್ಥಳೀಯ ನಿರೀಕ್ಷಣಾಧಿಕಾರಿಗಳಿಂದ ವಿಸ್ತ್ರತವಾದ ವರದಿಗಳನ್ನು ಪಡೆಯಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ಪ್ರೊಬೇಷನರಿ ಪರೀಕ್ಷೆಗಳೂ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವ ಮತ್ತು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಹಾಗೂ ದುರಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಹಲವು ಹಂತಗಳ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ.
ಅದರಂತೆಯೇ ಈ ಪರೀಕ್ಷೆಯಲ್ಲಿಯೂ ಸಹ ಪ್ರಶ್ನೆ ಪತ್ರಿಕೆಯ ಭದ್ರತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೊಹರು ಮಾಡಿದ ಪೆಟ್ಟಿಗೆ, ಮೊಹರು ಮಾಡಿದ ಲೋಹದ ಟ್ರಂಕ್ ಹಾಗೂ ಮೊಹರು ಮಾಡಿದ ಟ್ಯಾಂಪರ್ ಎವಿಡೆಂಟ್ ಕವರ್‌ಗಳನ್ನು ಇತ್ಯಾದಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅದರೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವಾಗ ಅವು ಹಾನಿಯಾಗದಂತೆ ಸಂರಕ್ಷಿಸಲು ನೀರು ನಿರೋಧಕ ಪ್ಲಾಸ್ಟಿಕ್ ಕವರ್‌ಗಳನ್ನು ದ್ರವ ಪದಾರ್ಥಗಳಿಂದ ಸುರಕ್ಷಿತವಾಗಿ ಸಂರಕ್ಷಿಸುವ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಲಾಗಿದ್ದು, ಅದು ಟ್ಯಾಂಪರ್ ಎವಿಡೆಂಟ್ ಕವರ್ ಆಗಿರುವುದಿಲ್ಲ ಎಂದು ಹೇಳಿದೆ.