ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು: ಸಿಎಂ ಸಿದ್ದು

ಹೊಸದಿಗಂತ ಚಿತ್ರದುರ್ಗ:

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಶುದ್ಧ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ ರೂ.೬೦ ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್‌ಪೋರ್ಸ್ ಸಮಿತಿಯಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು. ಅಗತ್ಯಬಿದ್ದರೆ ಮಾತ್ರ ಬೋರ‍್ವೆಲ್‌ಗಳನ್ನು ಕೊರೆಯಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬೋರ‍್ವೆಲ್ ಕೊರೆದು ವೆಚ್ಚ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ವಾಡಿಕೆಗಿಂತ ಶೇ.೫೫ರಷ್ಟು ಮಾನ್ಸೂನ್ ಪೂರ್ವ ಹೆಚ್ಚು ಮಳೆಯಾಗಿದೆ. ವಾಡಿಕೆಗಿಂತ ಯಾವುದೇ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿಲ್ಲ. ೨೭ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಎಲ್ಲಾ ಜಲಾಶಯಗಳಲ್ಲಿ ಶೇ.೫೦ ರಿಂದ ಶೇ.೬೦ರಷ್ಟು ಹೆಚ್ಚಿನ ನೀರಿನ ಸಂಗ್ರಹವಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್ ವಿಳಂಬವಾದರೆ ೬೩೧೯ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ೫೫೧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ೧೨೩ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ನೀರು ಪಡೆಯಲು ಈಗಾಗಲೇ ೩ ಸಾವಿರ ಖಾಸಗಿ ಬೋರ‍್ವೆಲ್‌ಗಳನ್ನು ಗುರುತಿಸಲಾಗಿದ್ದು, ೪೮೦ ಬೋರ‍್ವೆಲ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಸಮಸ್ಯೆ ಶುರುವಾಗುವ ಮೊದಲೇ ಸಭೆ ನಡೆಸಿ ಸಮರೋಪಾದಿ ಸಿದ್ಧತೆ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬಿ-ಖಾತಾ, ಇ-ಖಾತಾವನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಬೇಕು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರತಿ ದಿನವೂ ಒಂದು ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭಾಗಿಯಾಗಿದ್ದರು.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಪಾಟೀಲ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!