ಹೊಸದಿಗಂತ ವರದಿ,ಚಿತ್ರದುರ್ಗ :
ಪೊಲೀಸರಿಗೆ ಚಾಕು ಹಿರಿದು ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ಹೊಡೆದು ಆರೋಪಿಯನ್ನು ಬಂಧಿಸಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಸೀಬಾರ ಬಳಿ ಶುಕ್ರವಾರ ನಸುಕಿನ ಜಾವ ನಡೆದಿದೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಮುಖ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯು ನಗರದ ಹೊರವಲಯದಲ್ಲಿರುವ ಸೀಬಾರದ ಬಳಿ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೈ.ಮುದ್ದರಾಜ ತಮ್ಮ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ತೆರಳಿದರು. ಪೊಲೀಸರನ್ನು ಕಂಡ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಸಿದ್ದ.
ಪೊಲೀಸರು ಆರೋಪಿಯನ್ನು ಹಿಡಿಯಲು ಮುಂದಾದರು. ಇದನ್ನು ಗಮನಿಸಿದ ಆರೋಪಿ ತನ್ನಲ್ಲಿದ್ದ ಚಾಕುವನ್ನು ಪೊಲೀಸರಿಗೆ ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ಆರೋಪಿಯನ್ನು ಹಿಡಿಯಲು ಹೋದ ಸಿಬ್ಬಂದಿ ತಿಮ್ಮರಾಯಪ್ಪನವರ ಹೊಟ್ಟೆಗೆ ಚಾಕು ಚುಚ್ಚಲು ಮುಂದಾದ. ಇದರಿಂದ ತಿಮ್ಮರಾಯಪ್ಪನವರ ಕೈಗೆ ಚಾಕು ತಗುಲಿ ಗಾಯಗೊಂಡರು. ಕೂಡಲೇ ಎಚ್ಚೆತ್ತ ಪೊಲೀಸ್ ನಿರೀಕ್ಷಕ ವೈ.ಮುದ್ದರಾಜ ತಮ್ಮ ಬಳಿಯಿದ್ದ ಸರ್ವಿಸ್ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರು.
ಆದಾಗ್ಯೂ ಆರೋಪಿಯು ಪುನಃ ತಿಮ್ಮರಾಯಪ್ಪನವರಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ಪಿ.ಐ. ಮುದ್ದುರಾಜರವರು ಆರೋಪಿಯ ಕಡೆಗೆ ಗುಂಡು ಹಾರಿಸಿದರು. ಆರೋಪಿಯ ಮೊಣಕಾಲಿಗೆ ಗುಂಡು ತಗುಲಿದ್ದು, ಚಿತ್ರದುರ್ಗ ನಗರದ ಚೇಳುಗುಡ್ಡ ನಿವಾಸಿಯಾದ ಆರೋಪಿ ಮಹಮದ್ ಕಮ್ರಾನ್ ಮತ್ತು ಆರೋಪಿಯ ಹಲ್ಲೆಯಿಂದ ಗಾಯಗೊಂಡಿದ್ದ ಸಿಬ್ಬಂದಿ ತಿಮ್ಮರಾಯಪ್ಪ ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.