ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ಭಾರತೀಯ ಸೇನೆಯು ಶತ್ರು ರಾಷ್ಟ್ರವನ್ನು ಯಶಸ್ವಿಯಾಗಿ ಹಿಮ್ಮೆಟಿಸುತ್ತಾ, ದಾಳಿಗೆ ತಕ್ಕ ತಿರುಗೇಟು ನೀಡುತ್ತಿದೆ. ಈ ಮಧ್ಯೆ ಖ್ಯಾತ ಕ್ರಿಕೆಟ್ ಆಟಗಾರರು ಸಾಮಾಜಿಕ ಮಾಧ್ಯಮಗಳ ಮೂಲಕ ಸೇನೆಯ ಶೌರ್ಯಕ್ಕೆ ಸಲಾಮ್ ಹೇಳಿದ್ದಾರೆ.
ಭಾರತ ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುವ ಭಾರತೀಯ ಸೇನೆಯೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಅವರ ಧೈರ್ಯ ಮತ್ತು ತ್ಯಾಗಕ್ಕೆ ನಾವು ಶಾಶ್ವತವಾಗಿ ಋಣಿಯಾಗಿದ್ದೇವೆ ಜೈ ಹಿಂದ್ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ” ನಮ್ಮ ಸೇನೆಯ ಧೈರ್ಯ ಮತ್ತು ಶೌರ್ಯಕ್ಕೆ ಕೃತಜ್ಞರಾಗಿದ್ದೇವೆ. ನಮ್ಮ ಸುರಕ್ಷತೆಗಾಗಿ ಅವರು ಮಾಡುವ ಎಲ್ಲಕ್ಕೂ ನಾವು ಶಾಶ್ವತವಾಗಿ ಋಣಿಯಾಗಿದ್ದೇವೆ. ಭಾರತೀಯ ಸೇನೆಗೆ ನನ್ನ ಸಲಾಮ್” ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿ ಕ್ಷಣವೂ, ನಮ್ಮ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯು ನಮ್ಮ ರಕ್ಷಣೆಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಯೋಧರು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಎತ್ತರವಾಗಿ ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯನು ಜವಾಬ್ದಾರಿಯುತವಾಗಿರುವುದು ಮತ್ತು ಯಾವುದೇ ನಕಲಿ ಸುದ್ದಿಗಳನ್ನು ಹರಡುವುದರಿಂದ ಅಥವಾ ನಂಬುವುದರಿಂದ ದೂರವಿರುವುದು ಮುಖ್ಯ. ಎಲ್ಲರೂ ಸುರಕ್ಷಿತವಾಗಿರಿ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಶುಭ್ಮನ್ ಗಿಲ್, ಈ ಸಮಯದಲ್ಲಿ ರಾಷ್ಟ್ರವು ಎಲ್ಲಕ್ಕಿಂತ ಮಿಗಿಲು. ನಮಗೆ ಮತ್ತು ದೇಶಕ್ಕಾಗಿ ತ್ಯಾಗ ಮಾಡುವ ಅವರ ಕುಟುಂಬಗಳಿಗೆ ಸುರಕ್ಷತೆಯನ್ನು ಖಾತ್ರಿಪಡಿಸುವ ನಮ್ಮ ಸೈನಿಕರ ಧೀರ ಪ್ರಯತ್ನಗಳಿಂದಾಗಿ, ನಾವು ನಿಮಗಾಗಿ ಮತ್ತು ಎಲ್ಲರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.