February 2, 2026
Monday, February 2, 2026
spot_img

LIFE | ಜೀವನದಲ್ಲಿ ಬದಲಾವಣೆ ಬೇಕು ಅಂತ ಗೊತ್ತಿದ್ದರೂ, ಮೊದಲ ಹೆಜ್ಜೆ ಇಡೋವಾಗ ಭಯ ಆಗುತ್ತೆ ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದಲಾವಣೆ ಬೇಕು ಅನ್ನೋದು ಮನಸ್ಸಿಗೆ ಚೆನ್ನಾಗೇ ಗೊತ್ತು. ಆದ್ರೇ ಮೊದಲ ಹೆಜ್ಜೆ ಇಡೋ ಕ್ಷಣಕ್ಕೆ ಮಾತ್ರ ಹೃದಯ ಸ್ವಲ್ಪ ಜೋರಾಗಿ ಬಡಿತ ಶುರು ಮಾಡುತ್ತೆ. ಯಾಕೋ ಗೊತ್ತಿಲ್ಲ… ಕಾಲು ಮುಂದೆ ಹೋಗಬೇಕು ಅಂತ, ಮನಸ್ಸು ಹಿಂದಕ್ಕೆ ಎಳೆಯುತ್ತೆ.

ನಮಗೆ ಭಯವಾಗೋದು ಬದಲಾವಣೆಯಿಂದ ಅಲ್ಲ. ಬದಲಾವಣೆಯ ನಂತರ ಏನಾಗುತ್ತೋ ಅನ್ನೋ ಅನಿಶ್ಚಿತತೆಯಿಂದ. ಈಗಿರುವ ಜೀವನ ನೋವಾಗಿರಬಹುದು, ಅಸಮಾಧಾನದಿಂದ ಕೂಡಿರಬಹುದು. ಆದ್ರೂ ಅದು ಪರಿಚಿತ. ಅದೇ ನೋವನ್ನೇ ನಾವು “ಸುರಕ್ಷತೆ” ಅಂತ ತಪ್ಪಾಗಿ ಭಾವಿಸಿಕೊಂಡಿರುತ್ತೇವೆ. ಹೊಸ ದಾರಿ ಅಂದ್ರೆ ಹೊಸ ಪ್ರಶ್ನೆಗಳು, ಹೊಸ ಹೊಣೆಗಾರಿಕೆ, ಹೊಸ ನಿರೀಕ್ಷೆಗಳು.

ಮೊದಲ ಹೆಜ್ಜೆ ಅಂದ್ರೆ ಕೇವಲ ಒಂದು ಹೆಜ್ಜೆ ಅಲ್ಲ. ಅದು ಹಳೆಯ ನಂಬಿಕೆಗಳನ್ನು ಪ್ರಶ್ನಿಸುವುದು. “ನಾನು ಮಾಡಬಲ್ಲೆನಾ?”, “ಫೇಲ್ ಆದರೆ?” ಅನ್ನೋ ಪ್ರಶ್ನೆಗಳು ಒಂದೊಂದಾಗಿ ತಲೆ ಎತ್ತುತ್ತವೆ. ಈ ಪ್ರಶ್ನೆಗಳೇ ಭಯಕ್ಕೆ ರೂಪ ಕೊಡುತ್ತವೆ. ವಿಶೇಷವಾಗಿ ಎಲ್ಲರ ನಿರೀಕ್ಷೆ, ಸಮಾಜದ ದೃಷ್ಟಿ, ಕುಟುಂಬದ ಅಭಿಪ್ರಾಯ ಎಲ್ಲವು ಮನಸ್ಸಿಗೆ ಒತ್ತಡ ಆಗಿಬಿಡುತ್ತೆ.

ಇದನ್ನೂ ಓದಿ:

ಇನ್ನೊಂದು ಸತ್ಯ ಏನಂದ್ರೆ, ಬದಲಾವಣೆ ಅಂದ್ರೆ ಜವಾಬ್ದಾರಿ. ಈಗಿನ ಸ್ಥಿತಿಗೆ ಬೇರೆ ಯಾರನ್ನಾದರೂ ಹೊಣೆ ಮಾಡಬಹುದು. ಆದರೆ ಹೊಸ ದಾರಿಯಲ್ಲಿ ನಡೆದ್ಮೇಲೆ, ಎಲ್ಲದಕ್ಕೂ ನಾವು ಹೊಣೆ. ಆ ಹೊಣೆಗಾರಿಕೆಯೇ ಮೊದಲ ಹೆಜ್ಜೆಯನ್ನು ಭಾರವಾಗಿಸುತ್ತದೆ.

ಆದ್ರೆ ಒಂದು ವಿಚಾರ ನೆನಪಿರಲಿ. ಭಯ ಇದ್ದರೂ ಮುಂದೆ ಹೋಗೋದು ಧೈರ್ಯ. ಭಯ ಇಲ್ಲದೆ ಹೋಗೋದು ಅಲ್ಲ. ಮೊದಲ ಹೆಜ್ಜೆ ಪರ್ಫೆಕ್ಟ್ ಆಗಿರಬೇಕಿಲ್ಲ. ಅದು ಕೇವಲ ಸತ್ಯವಾಗಿದ್ರೆ ಸಾಕು. ಬದಲಾವಣೆ ಒಮ್ಮೆ ಶುರು ಆಯ್ತು ಅಂದ್ರೆ, ಭಯಕ್ಕಿಂತ ನಂಬಿಕೆ ನಿಧಾನವಾಗಿ ದೊಡ್ಡದಾಗುತ್ತಾ ಹೋಗುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !