February 2, 2026
Monday, February 2, 2026
spot_img

ಇವನ್ಯಾವ ಹುಚ್ಚು ಗಂಡ ಸ್ವಾಮೀ! ಹೆಂಡತಿಗೆ ಅವಮಾನ ಮಾಡಿದ ಮಾಲೀಕನ ಫೈನಾನ್ಸ್ ನಿಂದ ಚಿನ್ನ ಎಗರಿಸಿದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಎಲೂರಿನಲ್ಲಿ ನಡೆದ ಭಾರೀ ಚಿನ್ನದ ಕಳ್ಳತನ ಪ್ರಕರಣಕ್ಕೆ ಅಚ್ಚರಿಯ ಕಾರಣ ಬಹಿರಂಗವಾಗಿದೆ. ಕನಕದುರ್ಗಾ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾಮಹೇಶ್ ಎಂಬ ಉದ್ಯೋಗಿ, ತನ್ನ ಪತ್ನಿಗೆ ಕಂಪನಿ ಮಾಲೀಕರು ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಚಿಂತಲಪುಡಿಯಲ್ಲಿರುವ ಕನಕದುರ್ಗಾ ಫೈನಾನ್ಸ್‌ನಲ್ಲಿ 2025ರ ಸೆಪ್ಟೆಂಬರ್ 9ರಂದು ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಗ್ರಾಹಕರಿಂದ ಅಡಮಾನವಾಗಿ ಇಟ್ಟಿದ್ದ ಚಿನ್ನವನ್ನು ಲೆಕ್ಕಪರಿಶೋಧನೆ ಮಾಡುತ್ತಿದ್ದ ವೇಳೆ, ಮಹೇಶ್ ಚೀಲದಲ್ಲಿ ಚಿನ್ನ ತುಂಬಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ತಿಂಗಳ ಕಾಲ ಶೋಧ ನಡೆಸಿದರೂ ಆರೋಪಿಯ ಪತ್ತೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:

ಇತ್ತೀಚೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸುಮಾರು 7 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹೇಶ್ ವೃತ್ತಿಪರ ಕಳ್ಳನಲ್ಲ ಎಂಬುದೂ ತನಿಖೆಯಲ್ಲಿ ಸ್ಪಷ್ಟವಾಗಿದೆ. ಕದ್ದ ಚಿನ್ನದಲ್ಲಿ ವೈಯಕ್ತಿಕ ಬಳಕೆಗಾಗಿ ಕೇವಲ 6 ಗ್ರಾಂ ಉಂಗುರವೊಂದನ್ನು ಮಾತ್ರ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ, ಕಂಪನಿ ಮಾಲೀಕರು ತನ್ನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ತೀವ್ರವಾಗಿ ನೊಂದುಕೊಂಡು, ಸಂಸ್ಥೆಗೆ ನಷ್ಟ ಉಂಟುಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದೇನೆ ಎಂದು ಮಹೇಶ್ ಒಪ್ಪಿಕೊಂಡಿದ್ದಾನೆ. ಪ್ರಕರಣವು ಪ್ರತೀಕಾರದ ಮನಸ್ಥಿತಿಯಿಂದ ನಡೆದ ಅಪರಾಧವಾಗಿರುವುದು ಈಗ ಸ್ಪಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !