ಹೊಸದಿಗಂತ ವಿಜಯಪುರ:
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 58 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆಯಿಂದ ಮನನೊಂದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಐತಿಹಾಸಿಕ ಗಗನ್ ಮಹಲ್ ಉದ್ಯಾನದಲ್ಲಿ ಸೋಮವಾರ ನಡೆದಿದೆ.
ನಗರದ ನಿವಾಸಿ ರವೀಂದ್ರ ಮಡಿವಾಳರ (55) ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಸಂಗಮೇಶ ರಾಚಯ್ಯ ವಸ್ತ್ರದ ಎಂಬುವವರು ತಮಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಅಳಿಯನ ಪರಿಚಯವಿದೆಯೆಂದು ಹೇಳಿ, ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ರವೀಂದ್ರ ಅವರನ್ನು ನಂಬಿಸಿದ್ದರು. ಇದನ್ನು ನಂಬಿದ ರವೀಂದ್ರ ಅವರು ತಮಗೆ ಪರಿಚಯವಿದ್ದ ಯುವಕರಿಂದ ಬರೊಬ್ಬರಿ 58 ಲಕ್ಷ ರೂ. ಸಂಗ್ರಹಿಸಿ ಸಂಗಮೇಶನಿಗೆ ನೀಡಿದ್ದರು.
ಹಣ ನೀಡಿ ವರ್ಷ ಕಳೆದರೂ ಉದ್ಯೋಗವೂ ಸಿಗದೆ, ಹಣವೂ ಮರಳದೆ ರವೀಂದ್ರ ಅವರು ಇಕ್ಕಟ್ಟಿಗೆ ಸಿಲುಕಿದ್ದರು. ಹಣ ನೀಡಿದ ಯುವಕರು ಒತ್ತಡ ಹೇರುತ್ತಿದ್ದರಿಂದ ಕಂಗೆಟ್ಟ ಅವರು, ಡೆತ್ನೋಟ್ ಬರೆದಿಟ್ಟು ಹಾಗೂ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



