ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶಾಲಾ ಮಕ್ಕಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಾಠಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರು ಈ ಆದೇಶವನ್ನು ತಕ್ಷಣದಿಂದ ಅನುಸರಿಸಬೇಕು.
ಈ ಮಾರ್ಗಸೂಚಿಯ ಮುಖ್ಯ ಅಂಶಗಳು ಹೀಗಿವೆ:
ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಕೊರೋನಾ ಸಂಬಂಧಿತ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ, ಅವರನ್ನು ಶಾಲೆಗೆ ಕಳುಹಿಸದೆ ತಕ್ಷಣವೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಕೊಡಿಸಬೇಕು.
ಪೂರ್ಣ ಗುಣಮುಖವಾದ ನಂತರವೇ ಶಾಲೆಗೆ ಕಳುಹಿಸಿ: ಸೋಂಕು ಇರುವುದು ಅಥವಾ ಸೋಂಕಿನ ಲಕ್ಷಣಗಳು ಇರುವುದು ಖಚಿತವಾದಲ್ಲಿ ಮಕ್ಕಳು ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇದ್ದು ಗುಣಮುಖರಾಗಬೇಕು. ಇನ್ನು ಕೊರೋನಾ ಸೋಂಕಿನಿಂದ ತೀವ್ರವಾಗಿ ಅಥವಾ ಸಣ್ಣ ಮಟ್ಟದಲ್ಲಿ ಬಳಲಿದ ಮಕ್ಕಳು ವೈದ್ಯಕೀಯ ದೃಷ್ಟಿಯಿಂದ ಸಂಪೂರ್ಣವಾಗಿ ಗುಣಮುಖರಾದ ನಂತರವೇ ಶಾಲೆಗೆ ಹಾಜರಾಗಬೇಕು.
ಪೋಷಕರಿಗೆ ಮಾಹಿತಿ ನೀಡಬೇಕು: ಶಾಲೆಗೆ ಬಂದಿರುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ಪೋಷಕರಿಗೆ ಮಾಹಿತಿ ನೀಡಬೇಕು. ಜೊತೆಗೆ ಸಂಬಂಧಪಟ್ಟ ಪೋಷಕರಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಸೂಕ್ತ ಸಲಹೆ ನೀಡಬೇಕು.
ಶಾಲಾ ಸಿಬ್ಬಂದಿಗೂ ಸೂಕ್ತ ಜಾಗೃತಿ: ಶಿಕ್ಷಕರು ಅಥವಾ ಬೇರೆ ಸಿಬ್ಬಂದಿಗಳಿಗೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ, ಅವರಿಗೂ ಕೂಡ ವೈದ್ಯಕೀಯ ಸಲಹೆಯೊಂದಿಗೆ ವಿಶ್ರಾಂತಿ ನೀಡಬೇಕು. ಸೋಂಕಿನ ಲಕ್ಷಣಗಳಿದ್ದರೂ ಶಾಲೆಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಶಾಲಾ ಆಡಳಿತ ಮಂಡಳಿಗಳು ಈ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಆದೇಶದಲ್ಲಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.