ಹೊಸದಿಗಂತ ಡಿಜಿಟಲ್ ಡೆಸ್ಕ್:
ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎಲ್ಲ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಇದೀಗ ಈ ಎಲ್ಲಾ ಪಂಚಾಯಿತಿಗಳು ಸಲ್ಲಿಸಬೇಕಾದ ವರದಿಗಳನ್ನು ಪರಿಶೀಲಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಉಪ ಲೋಕಾಯುಕ್ತರು ಪ್ರತಿ ಗ್ರಾಮ ಪಂಚಾಯಿತಿಯಿಂದ ಉತ್ತರಿಸಬೇಕಾದ 30 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ. ನ್ಯಾಯಮೂರ್ತಿ ವೀರಪ್ಪ ಅವರು ಇತ್ತೀಚೆಗೆ ಈ ಗ್ರಾಮ ಪಂಚಾಯಿತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಅಲ್ಲಿ ಹಣದ ದುರುಪಯೋಗ, ದುರಾಡಳಿತ ಮತ್ತು ಇತರ ಅಕ್ರಮಗಳನ್ನು ಕಂಡುಬಂದಿದ್ದವು.
ಪಂಚಾಯತ್ ರಾಜ್ ಆಯುಕ್ತರು ಜನವರಿ 23 ರಂದು ಗ್ರಾಮ ಪಂಚಾಯಿತಿಗಳು ಸಲ್ಲಿಸಬೇಕಾದ ವರದಿಗಳನ್ನು ಪರಿಶೀಲಿಸಲು ಮೂವರು ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ಉಪ ಲೋಕಾಯುಕ್ತರು ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು 15 ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಈ ಸಮಿತಿಗೆ ನಿರ್ದೇಶನ ನೀಡಿದ್ದಾರೆ.



