ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ವರ್ಷಗಳ ಸುದೀರ್ಘ ರಕ್ತಪಾತಕ್ಕೆ ಅಂತ್ಯ ಹಾಡಲು ಅಬುಧಾಬಿಯಲ್ಲಿ ಮಹತ್ವದ ಶಾಂತಿ ಮಾತುಕತೆ ನಿಗದಿಯಾದ ಬೆನ್ನಲ್ಲೇ, ರಷ್ಯಾ ಉಕ್ರೇನ್ ಮೇಲೆ ಈ ವರ್ಷದ ಅತಿದೊಡ್ಡ ವೈಮಾನಿಕ ದಾಳಿ ನಡೆಸುವ ಮೂಲಕ ಶಾಂತಿ ಪ್ರಕ್ರಿಯೆಗೆ ತಣ್ಣೀರು ಎರಚಿದೆ.
ಉಕ್ರೇನಿಯನ್ ವಾಯುಪಡೆಯ ಮಾಹಿತಿ ಪ್ರಕಾರ, ರಷ್ಯಾ ಒಟ್ಟು 71 ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ದಾಖಲೆಯ 450 ಡ್ರೋನ್‌ಗಳ ಮೂಲಕ ದಾಳಿ ಸಂಘಟಿಸಿದೆ. ಉಕ್ರೇನ್ ಇಂಧನ ಸಚಿವ ಡೆನಿಸ್ ಶ್ಮೈಹಾಲ್ ನೀಡಿರುವ ಮಾಹಿತಿಯಂತೆ, ಈ ದಾಳಿಯು ಪ್ರಮುಖವಾಗಿ ಬಹುಮಹಡಿ ವಸತಿ ಸಮುಚ್ಚಯಗಳು ಮತ್ತು ದೇಶದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡಿತ್ತು.
ಇದನ್ನೂ ಓದಿ:
ರಷ್ಯಾದ ಈ ಬೃಹತ್ ದಾಳಿಯನ್ನು ಎದುರಿಸಿದ ಉಕ್ರೇನ್ ಪಡೆಗಳು, ಆಕಾಶದಲ್ಲೇ 38 ಕ್ಷಿಪಣಿಗಳನ್ನು ಮತ್ತು 412 ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಕಳೆದ ವಾರ ರಾಜಧಾನಿ ಕೀವ್ ಮೇಲೆ ದಾಳಿ ನಡೆಸದಿದ್ದರೂ, ದೇಶದ ಇತರ ಪ್ರಮುಖ ನಗರಗಳ ಮೇಲೆ ರಷ್ಯಾ ನಿರಂತರವಾಗಿ ಬಾಂಬ್ ಮಳೆಗರೆದಿದೆ.
ಈ ಹೇಯ ಕೃತ್ಯವನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ರಷ್ಯಾಗೆ ರಾಜತಾಂತ್ರಿಕತೆಗಿಂತ ಜನರನ್ನು ಭಯಭೀತಗೊಳಿಸುವುದೇ ಮುಖ್ಯವಾಗಿದೆ. ಶಾಂತಿಯ ಮಾತುಕತೆಯ ಹೊಸ್ತಿಲಲ್ಲಿ ಇಂತಹ ದಾಳಿ ನಡೆಸಿರುವುದು ಅವರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.



