ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿಯೂ ಫೈನ್ ಕಟ್ಟದೆ ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಟ್ಟಾರೆ ದೇಶದಲ್ಲಿ ಪಾವತಿಯಾಗಬೇಕಿರುವ ಟ್ರಾಫಿಕ್ ದಂಡದ ಮೊತ್ತ ₹45,000 ಕೋಟಿ ಎಂದು ಹೇಳಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆಯೊಂದನ್ನು ನೀಡಿದೆ.
ಕರೆಂಟ್ ಬಿಲ್ ಜೊತೆ ಸೇರಿಸಿಬಿಡಿ
ಟ್ರಾಫಿಕ್ ದಂಡವನ್ನು ಅವರವರ ಮನೆಯ ಕರೆಂಟ್ ಬಿಲ್ ಜೊತೆ ಮರ್ಜ್ ಮಾಡಿ ಕಳಿಸಿ. ಆಗ ಕರೆಂಟ್ ಹೋಗುವ ಭಯಕ್ಕೆ ಎಲ್ಲರೂ ಬಿಲ್ ಕಟ್ಟುತ್ತಾರೆ ಎಂದು ಹೇಳಿದೆ.ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿಚಾರಣೆಯೊಂದರಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು, “ಕೇವಲ ಇ-ಚಲನ್ ಜಾರಿ ಮಾಡುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಯಾರೆಲ್ಲಾ ದಂಡ ಕಟ್ಟಲು ನಿರಾಕರಿಸುತ್ತಾರೆಯೋ ಅಂತವರಿಗೆ ವಿದ್ಯುತ್ ಬಿಲ್ನಲ್ಲಿ ದಂಡವನ್ನು ಸೇರಿಸಿ ಕಟ್ಟಲು ನೀಡಿ. ಇದರಿಂದ ಅನಿವಾರ್ಯವಾಗಿ ಬಿಲ್ ಕಟ್ಟುತ್ತಾರೆ ಎಂದು ಪೀಠ ಸಲಹೆ ನೀಡಿದೆ.
ಸಲಹೆ ಏನು?
ದಂಡ ಪಾವತಿ ಮಾಡದ ವಾಹನಗಳನ್ನು ಪರಿವಾಹನ್ ಪೋರ್ಟಲ್ನಲ್ಲಿ ಬ್ಲಾಕ್ಲಿಸ್ಟ್ ಮಾಡಬೇಕು. ಆಗ ವಾಹನ ವರ್ಗಾವಣೆ, ಆರ್ಸಿ ವರ್ಗಾವಣೆ ಆಗುವುದಿಲ್ಲ. ದಂಡ ಬಾಕಿ ಇದ್ದರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ, ಫಿಟ್ನೆಸ್ ಸರ್ಟಿಫಿಕೇಟ್ ಅಥವಾ ಚಾಲನಾ ಪರವಾನಗಿ ನವೀಕರಣವನ್ನು ನಿಲ್ಲಿಸಬಹುದು.ರಸ್ತೆಗಳಲ್ಲಿ ತಪಾಸಣೆ ನಡೆಸಿ, ಬಾಕಿ ಇ-ಚಲನ್ ಹೊಂದಿರುವ ವಾಹನಗಳನ್ನು ಗುರುತಿಸಿ ಸ್ಥಳದಲ್ಲೇ ಜಪ್ತಿ ಮಾಡಲು ನ್ಯಾಯಾಲಯ ಸೂಚಿಸಿದೆ.
ದಂಡ ಕಟ್ಟದ ರಾಜ್ಯ ಯಾವುದು?
ಇತ್ತೀಚೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, 2021ರ ಜನವರಿಯಿಂದ 2026ರ ಜುಲೈ 30ರ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿ ಈ ಎರಡೇ ಭಾಗಗಳಲ್ಲಿ ಬರೋಬ್ಬರಿ 22,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಚಾರ ದಂಡ ಬಾಕಿ ಉಳಿದಿದೆ. ಉತ್ತರ ಪ್ರದೇಶ, ದೆಹಲಿ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ದಂಡ ಪಾವತಿ ಬಾಕಿ ಇದೆ. ಏತನ್ಮಧ್ಯೆ, ಕರ್ನಾಟಕ ರಾಜ್ಯಾದ್ಯಂತ ಒಟ್ಟು ಬಾಕಿ ಉಳಿದಿರುವ ಸಂಚಾರ ದಂಡದ ಮೊತ್ತ ಸುಮಾರು 2,827 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಸಿಂಹಪಾಲು ಬೆಂಗಳೂರು ನಗರದ್ದಾಗಿದ್ದು, ರಾಜಧಾನಿಯೊಂದರಲ್ಲೇ 1,000 ಕೋಟಿಗೂ ಅಧಿಕ ಮೊತ್ತದ ಸಂಚಾರ ಇ-ಚಲನ್ಗಳು ಬಾಕಿ ಇವೆ.



