May 10, 2026
Sunday, May 10, 2026
spot_img

ಸಿಗರೇಟ್ ಸೇದಿ ಹಣ ಕೇಳಿದ್ದೇ ತಪ್ಪಾಯ್ತು: ಅಂಗಡಿ ಮಾಲೀಕನನ್ನೇ ಬಲಿಪಡೆದ ಕಿರಾತಕರು!

ಹೊಸದಿಗಂತ ಬೆಳಗಾವಿ:

ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆ ವ್ಯಕ್ತಿಯೊಬ್ಬರ ಪ್ರಾಣವನ್ನೇ ಬಲಿಪಡೆದ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಕೇವಲ ಸಿಗರೇಟ್ ಹಣದ ವಿಚಾರಕ್ಕೆ ಶುರುವಾದ ಕಿರಿಕ್, ಅಂಗಡಿ ಮಾಲೀಕನ ಕೊಲೆಯಲ್ಲಿ ಅಂತ್ಯವಾಗಿದೆ.

ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ದುರ್ದೈವಿ. ಹುಕ್ಕೇರಿ ತಾಲೂಕಿನ ಮೋಹನಗಾ ಜಾತ್ರೆ ಮುಗಿಸಿ ಮದ್ಯದ ಅಮಲಿನಲ್ಲಿ ಬರುತ್ತಿದ್ದ ಕಡೋಲಿ ಗ್ರಾಮದ ನಾಲ್ವರು ಯುವಕರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧರ್ ರತನ ಪಾಟಿಲ್ (21) ಎಂದು ಗುರುತಿಸಲಾಗಿದೆ.

ನಿನ್ನೆ ತಡರಾತ್ರಿ ಅಂಗಡಿ ಮುಚ್ಚುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಈ ನಾಲ್ವರು ಯುವಕರು ಸಿಗರೇಟ್ ಪಡೆದು ಧೂಮಪಾನ ಮಾಡಿದ್ದಾರೆ. ಮಾಲೀಕ ಯಲ್ಲಪ್ಪ ಅವರು ಹಣ ಕೇಳಿದಾಗ ವಾಗ್ವಾದ ಶುರುವಾಗಿದೆ. ಮದ್ಯದ ಅಮಲಿನಲ್ಲಿದ್ದ ಯುವಕರು ಯಲ್ಲಪ್ಪ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಯಲ್ಲಪ್ಪ ಅವರನ್ನು ತಕ್ಷಣವೇ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:

ಘಟನೆ ನಡೆದ ಅರ್ಧ ಗಂಟೆಯಲ್ಲೇ ಕಾರ್ಯಪ್ರವೃತ್ತರಾದ ಕಾಕತಿ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿನಿಮಾ ಮಾದರಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !