ಹೊಸದಿಗಂತ ವರದಿ ಹಾನಗಲ್ಲ:
ಹಾನಗಲ್ಲ ಶ್ರೀ ಕುಮಾರೇಶ್ವರ ಮಠದ ಆಸ್ತಿ ಮಾರಾಟ ಮಾಡಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಡಿ ಮಠದ ಪೀಠಾಧಿಪತಿಯಾಗಿರುವ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ವಿರುದ್ಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ರವೀಂದ್ರ ಶಿವಮೂರ್ತೆಪ್ಪ ಚಿಕ್ಕೇರಿ (50) ದೂರು ನೀಡಿದ್ದಾರೆ.
ಏನು ದೂರು..?
ಹಾನಗಲ್ಲ ಪಟ್ಟಣದ ವೀರಶೈವ ವಿರಕ್ತಮಠಕ್ಕೆ ಸಂಬಂಧಿಸಿದ ಆಸ್ತಿಗಳು ಹಳೇ ಕೋಟೆ, ಪುರಸಭೆ ಹಾಗೂ ಬೆಳಗಾಲಪೇಟೆ ಗ್ರಾಪಂ ವ್ಯಾಪ್ತಿಯಲ್ಲಿವೆ. ಇವುಗಳನ್ನು ಮಾರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಮಠಕ್ಕೆ 1985ರಲ್ಲಿ ಕುಮಾರ ಸ್ವಾಮೀಜಿ (ಈಗಿನ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ) ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಗಿತ್ತು. ಶ್ರೀಗಳಿಗೆ ಮಠದ ಆಸ್ತಿಗಳನ್ನು ನೋಡಿಕೊಳ್ಳುವ ಅಧಿಕಾರ ಮಾತ್ರವಿದೆ. ಆದರೆ, ಸ್ವಾಮೀಜಿ ಮಠಕ್ಕೆ ಸಂಬಂಧಿಸಿದ ಬೆಳಗಾಲಪೇಟೆ ಗ್ರಾಮದಲ್ಲಿರುವ 2.38 ಎಕರೆ ಜಮೀನನ್ನು ಗಂಗಾಧರ ಹುಗ್ಗಿಶೆಟ್ಟರ್ ಎಂಬುವರಿಗೆ 4 ಲಕ್ಷ ರೂ.,ಗೆ ಮಾರಾಟ ಮಾಡಿದ್ದಾರೆ.
ಹಾನಗಲ್ಲ ಪುರಸಭೆ ವ್ಯಾಪ್ತಿಯ ಸರ್ವೇ ನಂ. 3689/23 ಮತ್ತು 3690ರ ಆಸ್ತಿಯನ್ನು ಕುಮಾರೇಶ್ವರ ಪತ್ತಿನ ಸಹಕಾರ ಸಂಘಕ್ಕೆ 12.08 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಇದೇ ರೀತಿ ಬೇರೆ ಬೇರೆ ಆಸ್ತಿಗಳನ್ನು ಮಾರಾಟ ಮಾಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿದ್ದಾರೆ. ಇದರ ಜತೆಗೆ ಭಕ್ತರಿಂದ ಬಂದ ಕಾಣಿಕೆ ಹಣ, ದೇಣಿಗೆ ಸ್ವಂತಕ್ಕೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



