ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಹೊರವಲಯದಲ್ಲಿರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 30 ಲಕ್ಷ ಮೌಲ್ಯದ ನಕಲಿ ಜೀನ್ಸ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ತಡರಾತ್ರಿ ಈ ದಾಳಿ ನಡೆಸಲಾಗಿದೆ.
ಪೊಲೀಸರ ಪ್ರಕಾರ, ಪ್ಯಾಂಟ್‌ಗಳನ್ನು ಪೂಮಾ (Puma), ನೈಕಿ (Nike), ಲೆವಿಸ್ (Levis), ಪೋಲೋ (Polo) ಮತ್ತು ರಾಲ್ಫ್ ಲಾರೆನ್ (Ralph Lauren) ಬ್ರಾಂಡ್‌ಗಳ ಲೇಬಲ್ ಹಾಕಿ ನಕಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಈ ಅಡ್ಡೆ ಎ.ಎ. ಫ್ಯಾಷನ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಯಾವುದೇ ಅಧಿಕೃತ ಲೈಸೆನ್ಸ್ ಇಲ್ಲದೇ ಬಟ್ಟೆಗಳ ನಕಲಿ ತಯಾರಿಕೆ ನಡೆಯುತ್ತಿದ್ದು, ಗ್ರಾಹಕರನ್ನು ಮೋಸಗೊಳಿಸಲಾಗುತ್ತಿತ್ತು.
ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಲಕೋನೇನಹಳ್ಳಿಯಲ್ಲಿರುವ ಗೋಡೌನ್‌ವೊಂದರಲ್ಲಿ ಈ ಅಕ್ರಮ ತಯಾರಿಕೆ ಚಟುವಟಿಕೆ ನಡೆಯುತ್ತಿದ್ದ ವಿಷಯ ಖಚಿತವಾದ ನಂತರ, ಪೊಲೀಸರು ಸ್ಥಳದಲ್ಲಿ ದಾಳಿ ನಡೆಸಿ, ನಕಲಿ ಜೀನ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕಾಫಿರೈಟ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಮೂಲಕ ಅಸಲಿ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವವರಿಗೆ ಬಿಸಿ ಮುಟ್ಟಲಿದೆ ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.