ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಜನವರಿ 10ರಂದು ಬಿಡುಗಡೆಯಾಗಬೇಕಿದ್ದರೂ, ಸೆನ್ಸಾರ್ ಪ್ರಮಾಣಪತ್ರದ ವಿಚಾರದಲ್ಲಿ ಉಂಟಾದ ಗೊಂದಲದಿಂದ ಚಿತ್ರ ಇನ್ನೂ ತೆರೆಗೆ ಬಂದಿಲ್ಲ.
ಆರಂಭಿಕ ದಿನಾಂಕದಲ್ಲೇ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗಿದ್ದರೂ, ಸಿಬಿಎಫ್‌ಸಿ ಅನುಮತಿ ವಿಳಂಬ ಮತ್ತು ನಂತರದ ಕಾನೂನು ಪ್ರಕ್ರಿಯೆಗಳು ಬಿಡುಗಡೆ ಮುಂದೂಡುವಂತಾಗಿವೆ. ಇದರಿಂದ ಚಿತ್ರಮಂದಿರಗಳು ಹಾಗೂ ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿದ್ದಿದೆ.
ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದ್ದರಿಂದ ಭಾರಿ ನಿರೀಕ್ಷೆ ಮೂಡಿಸಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಸಾವಿರಾರು ಅಭಿಮಾನಿಗಳು ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಆದರೆ ಹಠಾತ್ ಬಿಡುಗಡೆ ಮುಂದೂಡಲ್ಪಟ್ಟ ಕಾರಣ ಚಿತ್ರಮಂದಿರಗಳಲ್ಲಿ ನಿರಾಶೆ ವಾತಾವರಣ ನಿರ್ಮಾಣವಾಗಿದೆ. ವರದಿಗಳ ಪ್ರಕಾರ, ಬಿಡುಗಡೆಯ ವಿಳಂಬದಿಂದ ತಮಿಳುನಾಡಿನ ಥಿಯೇಟರ್‌ಗಳಿಗೆ ಸುಮಾರು 100 ಕೋಟಿ ರೂಪಾಯಿವರೆಗೆ ನಷ್ಟ ಉಂಟಾಗಿದೆ ಎಂದು ಸಿನಿಮಾ ವಲಯದ ವಿಶ್ಲೇಷಕರು ತಿಳಿಸಿದ್ದಾರೆ.
ಇದನ್ನೂ ಓದಿ:
ಸಿಬಿಎಫ್‌ಸಿ ಪ್ರಮಾಣಪತ್ರ ನಿರಾಕರಣೆ ಸಂಬಂಧಿಸಿದ ಪ್ರಕರಣ ಈಗ ನ್ಯಾಯಾಲಯದ ಹಂತದಲ್ಲಿದ್ದು, ವಿಚಾರಣೆ ಇನ್ನಷ್ಟು ಕಾಲ ಹಿಡಿಯುವ ಸಾಧ್ಯತೆ ಇದೆ. ಇದರಿಂದಾಗಿ ಚಿತ್ರತಂಡ ಹೊಸ ಮಾರ್ಗ ಹುಡುಕಲು ಮುಂದಾಗಿದೆ. ನ್ಯಾಯಾಲಯದ ಪ್ರಕ್ರಿಯೆ ಮುಂದುವರಿಸುವ ಬದಲು, ಸಿನಿಮಾವನ್ನು ಮತ್ತೆ ರಿವ್ಯೂ ಸಮಿತಿಗೆ ಕಳುಹಿಸುವ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ರಿವ್ಯೂ ಸಮಿತಿಗೆ ಚಿತ್ರ ಹೋದರೆ, ಸೂಚಿಸಲಾದ ಕಟ್ ಮತ್ತು ಮ್ಯೂಟ್‌ಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದ್ದರೂ, 15 ದಿನಗಳೊಳಗೆ ಪ್ರಮಾಣಪತ್ರ ಸಿಗುವ ಸಾಧ್ಯತೆ ಇದೆ.



