ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕೃಷಿ ತಾಪಂಡ ಬದುಕಿನಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ನಿನ್ನೆ ಮೊನ್ನೆಯಷ್ಟೇ ತಮ್ಮ ಲವ್‌ಲೈಫ್ ಬೀದಿಗೆ ಬಿದ್ದು ಸಮಸ್ಯೆಗಳನ್ನು ಅವರು ಎದುರಿಸಿದ್ದರು. ಇದಾದ ಬಳಿಕ ಈಗ ಅವರ ಸ್ನೇಹಿತ ವೈಶಾಖ್ ಕೃಷಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೈಶಾಖ್ ರಾಜರಾಜೇಶ್ವರಿ ನಗರದಲ್ಲಿರುವ ಕೃಷಿ ತಾಪಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವೈಶಾಖ್ ಫೋನ್‌ನ್ನು ತೆಗೆದುಕೊಂಡಿದ್ದಾರೆ. ಅವರ ಫೋನ್‌ನಿಂದ ಕಡೆಯ ಕಾಲ್ ಹಾಗೂ ಮೆಸೇಜ್ ನಟಿ ಕೃಷಿ ತಾಪಂಡಗೆ ಹೋಗಿದೆ. ಮೆಸೇಜ್‌ನಲ್ಲಿ ಕೃಷಿ ನನಗೆ ಜೀವನ ಸಾಕಾಗಿಹೋಗಿದೆ, ಇನ್ನು ನನ್ನ ಕೈಯಲ್ಲಿ ಬದುಕಿರೋಕೆ ಆಗೋದಿಲ್ಲ ಎಂದು ವೈಶಾಖ್ ಹೇಳಿದ್ದಾರೆ. ಅದಕ್ಕೆ ಕೃಷಿ ನಾನೀಗಲೇ ಹೊರಡುತ್ತೇನೆ. ಸಾಯುವ ಮಾತೆಲ್ಲಾ ಬೇಡ. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿಬರೋಣ ಮನಸ್ಸು ಹಗುರವಾಗುತ್ತದೆ ಎಂದು ಕೃಷಿ ಹೇಳಿದ್ದಾರೆ. ಅದಕ್ಕೆ ವೈಶಾಖ್ ಒಕೆ ಎಂದಿದ್ದಾರೆ. ಸಾಯುವ ಮುನ್ನವೂ ವೈಶಾಖ್ ಕೃಷಿಗೆ ಕರೆ ಮಾಡಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಎಷ್ಟೇ ಸಮಾಧಾನಪಡಿಸಿದರೂ ವೈಶಾಖ್ ಸಮಾಧಾನವಾಗಿಲ್ಲ. ನಂತರ ವೈಶಾಖ್ ಫ್ಯಾಮಿಲಿಗೆ ಕರೆ ಮಾಡಿ ಕೃಷಿ ವಿಷಯ ತಿಳಿಸಿದ್ದಾರೆ.
ವೈಶಾಖ್ ತಮ್ಮ ಪತ್ನಿಯೊಂದಿಗೆ ಜಗಳವಾಡಿಕೊಂಡು ಕೃಷಿ ಮನೆಯಲ್ಲಿ ಕೆಲ ದಿನಗಳಿಂದ ವಾಸವಿದ್ದರು. ಅಪಾರ್ಟ್‌ಮೆಂಟ್‌ನ ಕೀ ಕೂಡ ಅವರ ಬಳಿಯೇ ಇತ್ತು. ವೈಶಾಖ್‌ಗೆ ಮನೆ ಬಿಟ್ಟುಕೊಟ್ಟು ಕೃಷಿ ಕ್ಷೇಮವನದಲ್ಲಿ ಧ್ಯಾನಾಭ್ಯಾಸಕ್ಕೆಂದು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ತಡರಾತ್ರಿ ನಟಿ ಕೃಷಿ ತಾಪಂಡಾ ಅವರು ಮನೆಗೆ ಬರುವಷ್ಟರಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದನ್ನು ಕಂಡು ದಿಕ್ಕೆಟ್ಟ ನಟಿ, ತಕ್ಷಣವೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.



