ಹೊಸದಿಗಂತ ವರದಿ ಮಂಗಳೂರು:
ಕೇರಳ ಸರ್ಕಾರವು ವಿಶ್ವಬ್ಯಾಂಕ್‌ನ ಸಹಕಾರದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇರಳ ಹವಾಮಾನ ಸ್ಥಿತಿಸ್ಥಾಪಕ ಕೃಷಿ–ಮೌಲ್ಯ ಸರಪಳಿ ಆಧುನೀಕರಣ (KERA) ಯೋಜನೆಯಡಿಯಲ್ಲಿ ಐತಿಹಾಸಿಕ ಉಪಕ್ರಮವನ್ನು ಆರಂಭಿಸಿದೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇರಳ ಕೃಷಿ ಇಲಾಖೆ ಉಪ ನಿರ್ದೇಶಕ, ಕೇರ ಅನುಷ್ಠಾನಾಧಿಕಾರಿ ಸುರೇಶ್ ಸಿ ಥಂಪಿ ಈ ಬಗ್ಗೆ ಮಾಹಿತಿ ನೀಡಿದರು.

ರೈತ ಉತ್ಪಾದಕ ಕಂಪನಿಗಳು (FPCs) ಹಾಗೂ ಪ್ರಮುಖ ಕೃಷಿ ವ್ಯವಹಾರ ಸಂಸ್ಥೆಗಳ ನಡುವಿನ ಬಲಿಷ್ಠ ಉತ್ಪಾದಕ ಮೈತ್ರಿಗಳನ್ನು ರೂಪಿಸುವ ಉದ್ದೇಶದಿಂದ ಈ ಉಪಕ್ರಮ ಆರಂಭವಾಗಿದೆ. ಈ ಯೋಜನೆಯಡಿಯಲ್ಲಿ ಸಂಬಂಧಿತ ಕೃಷಿ ಮತ್ತು ಕೃಷಿಯೇತರ ಸಂಸ್ಥೆಗಳು, ಸೂಪರ್‌ಮಾರ್ಕೆಟ್ ಸರಪಳಿಗಳು, ರಫ್ತುದಾರರು ಹಾಗೂ ಇ–ಕಾಮರ್ಸ್ ವೇದಿಕೆಗಳನ್ನು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ಅವರು ವಿವರಿಸಿದರು.
ಉದ್ದೇಶ ಏನು?
ಕೇರಳದ ಉನ್ನತ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸುಸ್ಥಿರವಾಗಿ ಸಂಪರ್ಕಿಸುವುದರ ಮೂಲಕ, ರೈತರಿಗೆ ನ್ಯಾಯಸಮ್ಮತ ಬೆಲೆ ಮತ್ತು ಭದ್ರ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸುವುದು ಈ ಉಪ್ರಕಮದ ಮೂಲ ಉದ್ದೇಶವಾಗಿದೆ.
ಮೂರು ಹಂತದ ಕಾರ್ಯಕ್ರಮ
ಈ ಕಾರ್ಯಕ್ರಮವನ್ನು ಮೂರು ಹಂತಗಳಲ್ಲಿ, ಮೂರು ಪ್ರಮುಖ ಭೌಗೋಳಿಕ ಪ್ರದೇಶಗಳಲ್ಲಿ ಜಾರಿಗೆ ತಂದು ಒಟ್ಟು 150 ಉತ್ಪಾದಕ ಮೈತ್ರಿಗಳನ್ನು ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನೊಳಗೊಂಡ ಉತ್ತರ ಕೇರಳ ಪ್ರದೇಶದಲ್ಲಿ 50 ಉತ್ಪಾದಕ ಮೈತ್ರಿಗಳನ್ನು ರೂಪಿಸಲಾಗುವುದು.
ಮೂರು ವರ್ಷ ತಜ್ಞ ತಾಂತ್ರಿಕ ಸಹಾಯ
KERA ಯೋಜನೆಯಡಿಯಲ್ಲಿ ಆಯ್ಕೆಯಾಗುವ ಅರ್ಹ ಕಂಪನಿಗಳಿಗೆ, ಉತ್ಪಾದನಾ ಹೂಡಿಕೆ ಹಾಗೂ ವ್ಯವಹಾರ ಅಭಿವೃದ್ಧಿಗಾಗಿ ಒಟ್ಟು ಮೈತ್ರಿ ವೆಚ್ಚದ ಗರಿಷ್ಠ 2 ಕೋಟಿ ಮಿತಿಯೊಳಗೆ 60 ಶೇಕಡಾ ಅನುದಾನವನ್ನು ನೀಡಲಾಗುವುದು. ಜೊತೆಗೆ ಮೂರು ವರ್ಷಗಳ ಕಾಲ ತಜ್ಞ ತಾಂತ್ರಿಕ ಸಹಾಯವೂ ಒದಗಿಸಲಾಗುತ್ತದೆ.
ಯಾರಿಗೆ ಅರ್ಹತೆ?
ಕನಿಷ್ಠ 10 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಹಾಗೂ ಕೇರಳದ ರೈತ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುವ ದೃಢ ಬದ್ಧತೆಯನ್ನು ತೋರಿಸಿರುವ ಕಂಪನಿಗಳು ಈ ಉಪಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಕನಿಷ್ಠ ಎರಡು ವರ್ಷಗಳ ಕಾರ್ಯಾನುಭವ, 200 ಸದಸ್ಯರು ಹಾಗೂ 10 ಲಕ್ಷ ವಾರ್ಷಿಕ ವಹಿವಾಟು ಹೊಂದಿರುವ ರೈತ ಉತ್ಪಾದಕ ಕಂಪನಿಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಆಹ್ವಾನಿಸಲಾಗಿದೆ.
ಆಸಕ್ತ ಸಂಸ್ಥೆಗಳಿಗಿದೆ ಅವಕಾಶ
ಆಸಕ್ತ ಸಂಸ್ಥೆಗಳು ತಮ್ಮ ಅರ್ಜಿಗಳನ್ನು ಅಧಿಕೃತ ಪೋರ್ಟಲ್ https://pa.kera.kerala.gov.in/auth/login ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, KERA ಪ್ರಾದೇಶಿಕ ಯೋಜನಾ ನಿರ್ದೇಶಕರನ್ನು +91 90378 24060 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.



