ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಐಪಿಎಲ್ ಇತಿಹಾಸದ ಇಬ್ಬರು ಯಶಸ್ವಿ ಬಲಿಷ್ಠರು ಎಂದೇ ಕರೆಯಲ್ಪಡುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ 33ನೇ ಲೀಗ್ ಪಂದ್ಯ ನಡೆಯುತ್ತಿದೆ.
ಈ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಪ್ರಸಕ್ತ ಆವೃತ್ತಿಯಲ್ಲಿ ಎರಡೂ ತಂಡಗಳ ಪ್ರದರ್ಶನ ಅಷ್ಟೇನೂ ಆಶಾದಾಯಕವಾಗಿಲ್ಲ. ಆಡಿರುವ ಆರು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 4 ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಕೇವಲ 2 ಜಯದೊಂದಿಗೆ ಅಂಕಪಟ್ಟಿಯ ಕೆಳಭಾಗದಲ್ಲಿವೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಆವೃತ್ತಿಯ 3ನೇ ಜಯ ದಾಖಲಿಸಿ, ಪ್ಲೇ-ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಉಭಯ ತಂಡಗಳು ಹವಣಿಸುತ್ತಿವೆ.
ಮುಂಬೈ ಇಂಡಿಯನ್ಸ್ ತನ್ನ ತವರು ಮೈದಾನದಲ್ಲಿ ಆಡುತ್ತಿರುವುದು ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ವಾಂಖೆಡೆಯ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಮೊತ್ತದ ನಿರೀಕ್ಷೆಯಿದೆ. ಆದರೆ, ಸಿಎಸ್‌ಕೆ ತಂಡವು ತನ್ನ ಬಲಿಷ್ಠ ಬ್ಯಾಟಿಂಗ್ ಲೈನಪ್ ಮೂಲಕ ಮುಂಬೈ ಬೌಲರ್‌ಗಳನ್ನು ಎದುರಿಸಲು ಸಿದ್ಧವಾಗಿದೆ. ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ದಿಗ್ಗಜರ ಫಾರ್ಮ್ ಈ ಪಂದ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.



