ಹೊಸದಿಗಂತ ವರದಿ, ಬೆಳಗಾವಿ :
ಇಲ್ಲಿನ ಸಾಂಬ್ರಾ ವಿಮಾಣ ನಿಲ್ದಾಣಕ್ಕೆ ಬೇಕಾಗಿರುವ ಪ್ರಮುಖ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೇಂದ್ರದ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರನ್ನು, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೇಟಿಯಾಗಿ ಮಾತುಕತೆ ನಡೆಸಿದರು.
ಗುರುವಾರ ನವ ದೆಹಲಿಯಲ್ಲಿ ಕೇಂದ್ರದ ವಿಮಾನಯಾನ ಸಚಿವ ಕೆ. ರಾಮಮೋಹನ ಅವರನ್ನು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೇಟಿಯಾಗಿ ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಗಳ ಮೂಲಕ ವಿಮಾನಯಾನ ಸೇವೆ ಒದಗಿಸುವ ಕುರಿತು ಚರ್ಚಿಸಿ ಸಂಸದ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮನವಿ ಸಲ್ಲಿಸಿದರು.
ಬೆಳಗಾವಿ ನಗರವು ಉದ್ಯಮಿಕರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಕೇಂದ್ರ ಸರಕಾರದ ಉಡಾನ್ ಯೋಜನೆಯ ಅವಧಿ ಮುಕ್ತಾಯವಾದ ಬಳಿಕ ಹಲವು ನಗರಗಳಿಗೆ ಇದ್ದ ವಿಮಾನ ಸೇವೆ ರದ್ದಾದ ಪರಿಣಾಮ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಬೆಳಗಾವಿಯ ವಿಮಾನ ಮಾರ್ಗವಾಗಿ ಮುಂಬೈ, ಚೆನ್ನೈ, ಸುರತ್, ಪುಣೆ ಸೇರಿದಂತೆ ಪ್ರಮುಖ ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳ ಮೂಲಕ ವಿಮಾನಯಾನ ಸೇವೆ ಆರಂಭಿಸಲು ಸಂಬಂಧಿತ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಅದರಂತೆಯೇ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳನ್ನು ಕ್ರಮವಾಗಿ ಕಿತ್ತೂರ ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ಹಾಗೂ ಜಗಜ್ಯೋತಿ ಬಸವೇಶ್ವರ ಏರಪೋರ್ಟ್ ಎಂದು ಮರುನಾಮಕರಣ ಮಾಡುವ ರಾಜ್ಯ ಸರಕಾರದ ಅನೋಮೋದನೆ ನೀಡಲಾಗಿದೆ ಎಂದರು.
ಸಂಸದ ಜಗದೀಶ್ ಶೆಟ್ಟರ್ ಅವರ ಮನವಿಯನ್ನು ಸ್ಪಂದಿಸಿದ ಕೇಂದ್ರದ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಕೂಡಲೇ ಬೆಳಗಾವಿಗೆ ಹೆಚ್ಚಿನ ವಿಮಾನಯಾನ ಪ್ರಾರಂಭಿಸುವುದಾಗಿ ಭರವಸೆಳನ್ನು ನೀಡಿದರು.



