ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ ಕೋಟಿ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಎಂಬಾತನನ್ನು ಬಂಧಿಸಿದ್ದಾರೆ.
ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಮತ್ತು ಸ್ಯಾಂಡಲ್‌ವುಡ್ ನಟಿಗೆ ಸಂಬಂಧ ಕುರಿತು ಈ ಹಿಂದೆ ಸುದ್ದಿಯಾಗಿತ್ತು. ಇದಾಗಿ ಸ್ವಲ್ಪ ದಿನಗಳ ಬಳಿಕ ನಟಿ ಮತ್ತು ಅರವಿಂದ್ ರೆಡ್ಡಿ ತೀರಾ ಖಾಸಗಿಯಾಗಿದ್ದ ಫೋಟೋಗಳು ವೈರಲ್ ಆದವು. ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅರವಿಂದ ರೆಡ್ಡಿಗೆ ಜನವರಿ ತಿಂಗಳಲ್ಲಿ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಪತ್ರ ಬಂದಿತ್ತು.ಈ ಪತ್ರದಲ್ಲಿ, “ಪ್ರಸ್ತುತ ನಿನ್ನ ಮತ್ತು ಮಹಿಳೆಯೊಂದಿಗಿರುವ (ನಟಿ) ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್‌ಗೆ 6 ರಿಂದ 7 ಕೋಟಿ ರೂಪಾಯಿ ಹಣ ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಲಾಗಿತ್ತು.
ಇದರ ಬೆನ್ನಲ್ಲೇ ಬೆಂಗಳೂರು ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದು, ಬೆದರಿಕೆ ಪತ್ರದ ಮೂಲವನ್ನು ಪತ್ತೆಹಚ್ಚಲು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದರು. ಖಾಕಿ ಪಡೆ ಮೊದಲು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ,’ನನ್ನ ಬಾಸ್ ಹೇಳಿದಂತೆ ನಾನು ಪತ್ರವನ್ನು ಕೊರಿಯರ್ ಮಾಡಿದ್ದೇನೆ’ ಎಂದು ಆತ ಹೇಳಿಕೆ ನೀಡಿದ್ದಾನೆ.
ಇತ್ತ ಗ್ಯಾರೇಜ್ ಮಾಲೀಕನ ಪತ್ತೆಗೆ ಮುಂದಾದಾಗ, ವೈಶಾಕ್ ಎಂಬಾತನೇ ಈ ಬೆದರಿಕೆ ಪತ್ರ ಕಳುಹಿಸಿರುವ ಪ್ರಮುಖ ಆರೋಪಿ ಎಂಬುದು ತಿಳಿದು ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ವೈಶಾಕ್ ನನ್ನು ಅದೇ ಸ್ಯಾಂಡಲ್‌ವುಡ್ ನಟಿಯ ಮನೆಯಿಂದಲೇ ಬಂಧಿಸಿದ್ದಾರೆ.



